ಮೋದಿ ಕಾಲದ ಭ್ರಷ್ಟಗೊಂಡ ಶಿಕ್ಷಣ ವ್ಯವಸ್ಥೆ

Update: 2026-07-25 11:48 IST

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಹತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನಗಂಡಿದ್ದರೆ ಅತ್ಯಂತ ಪ್ರಾಮಾಣಿಕ ಮತ್ತು ಅಪಾರ ಜ್ಞಾನ ಹೊಂದಿದವರನ್ನು ಆ ಇಲಾಖೆಗೆ ಸಚಿವರಾನ್ನಾಗಿಸುತ್ತಿದ್ದರು. ಹಾಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಬಂದವರು. ವಿದ್ಯಾರ್ಥಿ ಸಂಘಟನೆಯಿಂದ ಬಂದ ಮಂತ್ರಿಗೆ ಕನಿಷ್ಠ ವಿದ್ಯಾರ್ಥಿ ಸಮುದಾಯದ ಭಾವನೆಗಳಾದರೂ ಅರ್ಥವಾಗಬೇಕಿತ್ತು. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಂತ್ರಿ ಹುದ್ದೆಯ ಘನತೆ ಗೌರವ ಅರಿಯದ ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿಗಳ ಆಕ್ರೋಶ, ಹೋರಾಟ ನೋಡಿದ ಮೇಲಾದರೂ ರಾಜೀನಾಮೆ ನೀಡಿ ಹುದ್ದೆಯ ಘನತೆ ಉಳಿಸಬೇಕಿತ್ತು.

‘‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲು ಬಾರದು

ಏರಿ ನೀರುಂಬುಡೆ, ಬೇಲಿ ಕೆಯ್ಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲಸಂಗಮ ದೇವಾ’’

-ಬಸವಣ್ಣ

ಮೇಲಿನ ವಚನವು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ವೈಖರಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿರ್ಲಜ್ಜ ನಡವಳಿಕೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಸಂಖ್ಯಾತ ಯುವ ಸಮುದಾಯದ ಮೇಲೆ ಕ್ರೂರ ದಾಳಿ ನಡೆಸಿದ ಗೃಹ ಸಚಿವ ಆಮಿತ್ ಶಾ ಅವರ ಕುಕೃತ್ಯಕ್ಕೆ ಕನ್ನಡಿ ಹಿಡಿದಂತಿದೆ. ಯುವ ಜನತೆಯ ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸದ ಯಾವ ಸರಕಾರವೂ ಹೆಚ್ಚು ಕಾಲ ಬಾಳಿಲ್ಲ.

ಜಯಪ್ರಕಾಶ್ ನಾರಾಯಣ ನೇತೃತ್ವದ ಸಂಪೂರ್ಣ ಕ್ರಾಂತಿ ದೇಶದ ಉದ್ದಗಲಕ್ಕೂ ವ್ಯಾಪಿಸಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಕಿತ್ತೆಸೆದದ್ದು ಯುವ ಸಮುದಾಯದ ಸಾತ್ವಿಕ ಆಕ್ರೋಶ ಎಂಬುದು ನರೇಂದ್ರ ಮೋದಿ ಮರೆತಂತಿದೆ. 2014ಕ್ಕೂ ಮುಂಚೆ ಇದೇ ಜಂತರ್ ಮಂತರ್‌ನಲ್ಲಿ ಅಣ್ಣಾ ಹಝಾರೆ, ಅರವಿಂದ ಕೇಜ್ರಿವಾಲ್, ಯೋಗೇಂದ್ರ ಯಾದವ್ ಮುಂತಾದವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ನಡೆಸಿದ ಹೋರಾಟಕ್ಕೆ ಬಲ ನೀಡಿದ್ದು ಯುವ ಸಮುದಾಯವೇ. ಆ ಯುವ ಸಮುದಾಯದ ಬೆಂಬಲದಿಂದಲೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರಕಾರ ಅದೇ ಯುವ ಸಮುದಾಯದ ಮೇಲೆ ಅತ್ಯಂತ ಕ್ರೂರ ದಾಳಿ ನಡೆಸಿ ವಿಕೃತಿ ಮೆರೆದದ್ದು ಈ ದೇಶದ ದುರಂತ. ‘ವಿನಾಶ ಕಾಲೇ ವಿಪರೀತ ಬುದ್ಧಿ’ ಪ್ರದರ್ಶಿಸುತ್ತಿದ್ದಾರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಸದಾ ನೈತಿಕ ಪಾಠ ಹೇಳುವ ಸಂಘ ಪರಿವಾರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೌನಕ್ಕೆ ಶರಣಾಗಿದ್ದು ಯುವ ಸಮುದಾಯವನ್ನು ಅಪಮಾನಿಸಿದಂತಿದೆ.

ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷದ ಮುಖಂಡರು, ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಮುಂತಾದವರು ಕೇಂದ್ರ ಶಿಕ್ಷಣ ಮಂತ್ರಾಲಯದ ಬ್ರಹ್ಮಾಂಡ ಭ್ರಷ್ಟಾಚಾರದ ಒಂದು ತುಣುಕಿನ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಇಡೀ ಮಾನವ ಸಂಪನ್ಮೂಲ ಮಂತ್ರಾಲಯವೇ(ಶಿಕ್ಷಣ ಇಲಾಖೆ)ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ. ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯದ ಒಟ್ಟು ವ್ಯವಸ್ಥೆಯನ್ನು ವಿರೂಪಗೊಳಿಸಿದ ಅಪಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಒಂದು ಸ್ಯಾಂಪಲ್ ಅಷ್ಟೇ.

ಕೇಂದ್ರದಲ್ಲಿ ಶಿಕ್ಷಣ ಮಂತ್ರಾಲಯ ಅಸ್ತಿತ್ವಕ್ಕೆ ಬಂದು 78 ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಹಲವಾರು ಜನ ಪ್ರಧಾನಮಂತ್ರಿಗಳು, ಶಿಕ್ಷಣ ಸಚಿವರು ಬಂದು ಹೋಗಿದ್ದಾರೆ. ಈ ಹಿಂದಿನ ಎಲ್ಲ ಪ್ರಧಾನಮಂತ್ರಿಗಳು, ಶಿಕ್ಷಣ ಸಚಿವರು ತಮ್ಮ ಶಕ್ತಿ ಮೀರಿ ಶಿಕ್ಷಣ ಮಂತ್ರಾಲಯದ ಗುಣಮಟ್ಟ ಹೆಚ್ಚಿಸಲು ಶ್ರಮಿಸಿದ್ದಾರೆ. ಈ ಹಿಂದಿನ ಯಾರೊಬ್ಬರೂ ಶಿಕ್ಷಣ ಮಂತ್ರಾಲಯದಲ್ಲಿ ಭ್ರಷ್ಟಾಚಾರ ನಡೆಸಲು ಅವಕಾಶ ಮಾಡಿಕೊಟ್ಟಿರಲಿಲ್ಲ. ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆ ಅಲಂಕರಿಸುತ್ತಲೇ ರಾಜ್ಯಗಳ ಸ್ವಾಯತ್ತೆಯನ್ನು ಕಿತ್ತುಕೊಳ್ಳಲು ಆರಂಭಿಸಿದರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮುಂಚೆ ಕಾಂಗ್ರೆಸ್, ಜನತಾ ಪಕ್ಷ ಮತ್ತು ಭಾರತೀಯ ಜನತಾ ಪಕ್ಷಗಳ ಸರಕಾರಗಳು ಆಡಳಿತ ನಡೆಸಿವೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗ ಡಾ. ಮುರಳಿ ಮನೋಹರ್ ಜೋಶಿಯವರು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಂತ್ರಿಯಾಗಿದ್ದರು. ಆಗ ಸಂಘ ಪರಿವಾರಕ್ಕೆ ಹತ್ತಿರವಾಗಿದ್ದ ಕೆಲವರನ್ನು ಉನ್ನತ ಉದ್ದೆಯಲ್ಲಿ ಪ್ರತಿಷ್ಠಾಪಿಸಿದ್ದರು. ಆದರೆ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿರಲಿಲ್ಲ. ಅಷ್ಟು ಮಾತ್ರವಲ್ಲ, ವಿವಿಧ ರಾಜ್ಯಗಳ ಶಿಕ್ಷಣ ವಲಯದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿರಲಿಲ್ಲ. ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಕೇಂದ್ರ ಸರಕಾರ ಮೂಗು ತೂರಿಸುತ್ತಿರಲಿಲ್ಲ. ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸೇರಿದಂತೆ ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯ ವ್ಯಾಪ್ತಿಯ ಸಂಸ್ಥೆಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಬಿಟ್ಟಿದ್ದರು.

ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ಅವಧಿಯಲ್ಲೇ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವನ್ನು ದುರ್ಬಲಗೊಳಿಸಿದರು. ಯುಜಿಸಿ ಅನುದಾನವನ್ನು ಅವಲಂಬಿಸಿದ್ದ ರಾಜ್ಯಗಳ ವಿಶ್ವವಿದ್ಯಾನಿಲಯಗಳು ಬಡವಾದವು. ಕೇಂದ್ರ ಸರಕಾರದ ವ್ಯಾಪ್ತಿಯ ಮೆಡಿಕಲ್ ಕಾಲೇಜುಗಳನ್ನು ಹೊರತು ಪಡಿಸಿದ ವಿವಿಧ ರಾಜ್ಯಗಳ ಮೆಡಿಕಲ್ ಸೀಟುಗಳನ್ನು ಆಯಾ ರಾಜ್ಯಗಳು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಂಚುತ್ತಿದ್ದರು. ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆ ಅಲಂಕರಿಸುತ್ತಲೇ ವಿವಿಧ ರಾಜ್ಯಗಳ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯ ಇರುವ ಸೀಟುಗಳ ಪೈಕಿ ಪ್ರತಿಶತ ಹದಿನೈದರಷ್ಟು ಕೇಂದ್ರದ ಪಾಲು ಎಂದು ಕಿತ್ತುಕೊಂಡರು. ತಮಿಳುನಾಡು ಸರಕಾರ ಎಷ್ಟೇ ಪ್ರತಿರೋಧ ವ್ಯಕ್ತಪಡಿಸಿದರೂ ನರೇಂದ್ರ ಮೋದಿಯವರು ಜಗ್ಗಲಿಲ್ಲ ಬಗ್ಗಲಿಲ್ಲ. ವಿವಿಧ ರಾಜ್ಯಗಳ ಪ್ರತಿಶತ ಹದಿನೈದು ಮೆಡಿಕಲ್ ಸೀಟುಗಳು ಮತ್ತು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯ ಇರುವ ಮೆಡಿಕಲ್ ಸೀಟುಗಳನ್ನು ವಿತರಿಸಲು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸಲು ಆರಂಭಿಸಿದರು. ನೀಟ್ ಪರೀಕ್ಷೆಯನ್ನು ಕೇಂದ್ರ ಶಿಕ್ಷಣ ಮಂತ್ರಾಲಯ ವ್ಯಾಪ್ತಿಯಲ್ಲಿ ಇರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮೂಲಕ ನಡೆಸಲಾಗುತ್ತದೆ. ಈ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಯನ್ನು ನಡೆಸುತ್ತದೆ. ಈ ಪರೀಕ್ಷೆಗಳನ್ನು ರಾಷ್ಟ್ರ ಮಟ್ಟದ ವಿಶ್ವಸಾರ್ಹ ಹಾಗೂ ಶ್ರೇಷ್ಠ ಪ್ರವೇಶ ಪರೀಕ್ಷೆಗಳೆಂದು ಪರಿಗಣಿಸಲಾಗುತ್ತಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾದ ಆರಂಭದ ದಿನಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಸ್ಮತಿ ಇರಾನಿಯವರು ಸಚಿವರಾಗಿದ್ದರು. ತಾವಿದ್ದ ಸಮಯದಲ್ಲಿ ಅವರು ಭ್ರಷ್ಟಾಚಾರಕ್ಕೆ ಅವಕಾಶವಿರದಂತೆ ಕಾರ್ಯ ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು. ಸಂಘ ಪರಿವಾರದ ಸಿದ್ಧಾಂತ ಒಪ್ಪದ ಶಿಕ್ಷಣ ತಜ್ಞರನ್ನೂ ಸ್ಮತಿ ಇರಾನಿ ಗೌರವಿಸುತ್ತಿದ್ದರು. ಪಿಎಚ್.ಡಿ. ಮಾರ್ಗದರ್ಶಕನ ಕಿರುಕುಳದಿಂದ ಆಂಧ್ರ ಪ್ರದೇಶದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡರು. ಆ ಪ್ರಕರಣದಲ್ಲಿ ಸ್ಮತಿ ಇರಾನಿಯವರ ಸಚಿವ ಖಾತೆ ಬದಲಾಯಿತು. ಸ್ಮತಿ ಇರಾನಿ ಕೇವಲ ಎರಡು ವರ್ಷ ಮಾತ್ರ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸ್ಮತಿ ಇರಾನಿ ನಂತರ ಶಿಕ್ಷಣ ಸಚಿವರಾಗಿ ಬಂದ ರಮೇಶ್ ಪೊಕ್ರಿಯಾಲ್ ನಿಶಾಂಕ್ ಪರಮ ಭ್ರಷ್ಟ ರಾಜಕಾರಣಿ. ಈತನ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಪರ್ವ ಶುರುವಾಯಿತು. ಆಯಕಟ್ಟಿನ ಜಾಗದಲ್ಲಿ ಪರಮ ಭ್ರಷ್ಟರನ್ನು ಸೇರಿಸಿದರು. ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಕೇಂದ್ರವಾಗಿ ಬದಲಾದದ್ದು ಆಗಲೇ. ಈತ ಕೇವಲ ಎರಡು ವರ್ಷಗಳ ಕಾಲ ಕೇಂದ್ರ ಶಿಕ್ಷಣ ಸಚಿವನಾಗಿ ಕಾರ್ಯ ನಿರ್ವಹಿಸಿದ್ದರು. ಎರಡು ವರ್ಷಗಳಲ್ಲಿ ಎಲ್ಲ ಪ್ರವೇಶ ಪರೀಕ್ಷೆಗಳ ವಿಶ್ವಾಸಾರ್ಹತೆ ಹಾಳು ಮಾಡಿದರು. ರಮೇಶ್ ಪೊಕ್ರಿಯಾಲ್ ಅವರಿಗಿಂತ ಮುಂಚೆ ಪ್ರಕಾಶ್ ಜಾವಡೇಕರ್ ಮೂರು ವರ್ಷಗಳ ಕಾಲ ಶಿಕ್ಷಣ ಸಚಿವರಾಗಿದ್ದರು. ಸಂಘ ಪರಿವಾರದ ಹಿನ್ನೆಲೆಯ ಪ್ರಕಾಶ ಜಾವಡೇಕರ್ ಮಹಾರಾಷ್ಟ್ರ ರಾಜ್ಯದ ಆಚೆ ಕಾಣಿಸಿಕೊಳ್ಳಲಿಲ್ಲ. ಶಿಕ್ಷಣ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಲು ಅವರಿಂದ ಸಾಧ್ಯವಾಗಲಿಲ್ಲ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಎಂದು ಶಿಕ್ಷಣ ಇಲಾಖೆಗೆ ಮರು ನಾಮಕರಣ ಮಾಡಿದ್ದೇ ದಿ. ರಾಜೀವ್ ಗಾಂಧಿಯವರು. ಅವರು ಪ್ರಧಾನಮಂತ್ರಿಯಾಗಿದ್ದಾಗ ಶಿಕ್ಷಣ ಇಲಾಖೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಎಂದು ಮರು ನಾಮಕರಣ ಮಾಡಿ, ಪಿ. ವಿ. ನರಸಿಂಹರಾವ್ ಅವರನ್ನು ಮಂತ್ರಿಯನ್ನಾಗಿಸಿದ್ದರು. ಅವರ ಕಾಲದಲ್ಲೇ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ರೂಪಿಸಿ ಇಲಾಖೆಯ ಘನತೆ ಗೌರವ ಹೆಚ್ಚಿಸಿದ್ದರು. ಜವಾಹರ್ ನವೋದಯ ವಿದ್ಯಾನಿಲಯಗಳನ್ನು ಆರಂಭಿಸಿದ ಕೀರ್ತಿ ದಿ. ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ. 1986 ನೂತನ ಶಿಕ್ಷಣ ನೀತಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಲ್ಲಿ ಹೊಸ ಬದಲಾವಣೆಗೆ ಕಾರಣವಾಯಿತು. ಪಿ.ವಿ. ನರಸಿಂಹರಾವ್ ಭಾರತದ ಪ್ರಧಾನಮಂತ್ರಿ ಹುದ್ದೆ ನಿಭಾಯಿಸಿದವರು. ಸಾಹಿತಿ, ಶಿಕ್ಷಣ ತಜ್ಞರಾಗಿದ್ದ ಅವರು ನಾಲ್ಕು ವರ್ಷಗಳ ಕಾಲ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಶಿಕ್ಷಣ ಇಲಾಖೆಯನ್ನು ದೇಶದ ಆತ್ಮದಂತೆ ಕಾಪಾಡಿಕೊಂಡು ಬಂದಿದ್ದಾರೆ. 1947ರಿಂದ 1958ರವರೆಗೆ ಒಟ್ಟು ಒಂಭತ್ತು ವರ್ಷಗಳ ಕಾಲ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಮೌಲಾನಾ ಅಬುಲ್ ಕಲಾಂ ಆಝಾದ್ ಅವರು ಹಲವು ಮೊದಲುಗಳಿಗೆ ನಾಂದಿ ಹಾಡಿದವರು. ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ರವೀಂದ್ರನಾಥ ಟಾಗೋರ್ ಅವರ ಕನಸಿನ ಶಾಂತಿನಿಕೇತನವನ್ನು ವಿಶ್ವದರ್ಜೆಯ ವಿಶ್ವವಿದ್ಯಾನಿಲಯವನ್ನಾಗಿಸಿದ್ದರು. ಶಾಂತಿನಿಕೇತನ ಈಗ ವಿಶ್ವಭಾರತಿ ಕೇಂದ್ರೀಯ ವಿಶ್ವವಿದ್ಯಾನಿಲಯವಾಗಿ ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಮನ್ನಣೆ ಗಳಿಸಿದೆ. ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಕಾಲಕ್ಕೆ ಅಸ್ತಿತ್ವಕ್ಕೆ ಬಂದ ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾನಿಲಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಈ ಹೊತ್ತಿಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿವೆ. ಜೆಎನ್‌ಯು ಅಂತರ್‌ರಾಷ್ಟ್ರೀಯ ಖ್ಯಾತಿಯ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿದೆ.

ದಿ. ರಾಜೀವ್ ಗಾಂಧಿ ಕಾಲದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯನ್ನು ಮತ್ತೆ ಶಿಕ್ಷಣ ಇಲಾಖೆ ಎಂದು ಹೆಸರು ಬದಲಾಯಿಸಿದ್ದಷ್ಟೇ ಮೋದಿಯವರ ಸಾಧನೆಯಾಗಿ ಉಳಿದಿದಿದೆ. ಈಗ ಅದರ ಜೊತೆಗೆ ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು ಉನ್ನತ ಶಿಕ್ಷಣದ ಬಗ್ಗೆ ಎಲ್ಲರೂ ಗುಮಾನಿಯಿಂದ ನೋಡುವಂತಾಗಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಹತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನಗಂಡಿದ್ದರೆ ಅತ್ಯಂತ ಪ್ರಾಮಾಣಿಕ ಮತ್ತು ಅಪಾರ ಜ್ಞಾನ ಹೊಂದಿದವರನ್ನು ಆ ಇಲಾಖೆಗೆ ಸಚಿವರಾನ್ನಾಗಿಸುತ್ತಿದ್ದರು. ಹಾಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಬಂದವರು. ವಿದ್ಯಾರ್ಥಿ ಸಂಘಟನೆಯಿಂದ ಬಂದ ಮಂತ್ರಿಗೆ ಕನಿಷ್ಠ ವಿದ್ಯಾರ್ಥಿ ಸಮುದಾಯದ ಭಾವನೆಗಳಾದರೂ ಅರ್ಥವಾಗಬೇಕಿತ್ತು. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಂತ್ರಿ ಹುದ್ದೆಯ ಘನತೆ ಗೌರವ ಅರಿಯದ ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿಗಳ ಆಕ್ರೋಶ, ಹೋರಾಟ ನೋಡಿದ ಮೇಲಾದರೂ ರಾಜೀನಾಮೆ ನೀಡಿ ಹುದ್ದೆಯ ಘನತೆ ಉಳಿಸಬೇಕಿತ್ತು. ಕೇಂದ್ರ ಶಿಕ್ಷಣ ಮಂತ್ರಾಲಯವನ್ನು ಮುನ್ನಡೆಸಿದವರ ಹೆಸರಿನ ಮೇಲೆ ಒಮ್ಮೆ ಕಣ್ಣಾಡಿಸಿದರೆ ಆ ಇಲಾಖೆಯ ಪ್ರಾಮುಖ್ಯತೆ ತಿಳಿದುಕೊಳ್ಳಬಹುದಾಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಬಗ್ಗೆ ಗೌರವ ಇಲ್ಲ ಎಂಬುದು ಮಂತ್ರಿಗಳ ನೇಮಕಾತಿಯಲ್ಲೇ ಸ್ಪಷ್ಟವಾಗುತ್ತದೆ.

ವಿದ್ಯಾರ್ಥಿ ಸಂಘಟನೆಯಿಂದ ಬಂದ ಧರ್ಮೇಂದ್ರ ಪ್ರಧಾನ್ ಆ ಇಲಾಖೆಯ ಹೊಣೆಗಾರಿಕೆ ಸ್ವೀಕರಿಸುವ ಮುಂಚೆ ಹಿಂದಿನ ಸಚಿವರ ಪಟ್ಟಿ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಮಟ್ಟಿಗೆ ಇಲಾಖೆಯ ಮರ್ಯಾದೆ ಬೀದಿ ಪಾಲಾಗುತ್ತಿರಲಿಲ್ಲ.

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿ ಬಹಳ ದೊಡ್ಡದು. ಅದರ ವಾರ್ಷಿಕ ಆಯ ವ್ಯಯ ರೂ. 1,39,289 ಕೋಟಿ (2026-27)ಯಷ್ಟಿದೆ. ಈ ಇಲಾಖೆಯ ವ್ಯಾಪ್ತಿಯಲ್ಲಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ರಾಜರಾಮ ಮೋಹನರಾಯ್ ಏಜೆನ್ಸಿಯಂಥ ಪ್ರತಿಷ್ಠಿತ ಕೇಂದ್ರಗಳು ಸೇರಿಕೊಂಡಿವೆ. 56 ಕೇಂದ್ರೀಯ ವಿಶ್ವವಿದ್ಯಾನಿಲಯಗಳು, 23 ಐಐಟಿಗಳು, 31 ಎನ್‌ಐಟಿಗಳು, 26 ಐಐಐಟಿಗಳು, 21 ಐಐಎಂಗಳು ಇವೆ. ಯುಜಿಸಿ, ನ್ಯಾಕ್, ಅಖಿಲ ಭಾರತ ಶಿಕ್ಷಣ ಪರಿಷತ್ತು, ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಭಾರತೀಯ ಶಿಕ್ಷಣ ಸಂಸ್ಥೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಭಾರತದ ರಾಷ್ಟ್ರಪತಿಯಾಗಿರುತ್ತಾರೆ. ವಿಶ್ವಭಾರತಿ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಮಾತ್ರ ಭಾರತದ ಪ್ರಧಾನಮಂತ್ರಿ ಮುಖ್ಯಸ್ಥರಾಗಿರುತ್ತಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ನೊಗವನ್ನು ಇಲ್ಲಿಯವರೆಗೆ ಭಾರತದ ಹಿರಿಯ ಮುತ್ಸದ್ದಿಗಳು, ಶಿಕ್ಷಣ ತಜ್ಞರು ಹೊತ್ತಿದ್ದಾರೆ. ಹುಮಾಯೂನ್ ಕಬೀರ್, ಫಕ್ರುದ್ದಿನ್ ಅಲಿ ಅಹ್ಮದ್, ಖ್ಯಾತ ಶಿಕ್ಷಣ ತಜ್ಞ ಡಾ. ವಿ.ಕೆ.ಆರ್.ವಿ. ರಾವ್, ಹಿರಿಯ ಮುತ್ಸದ್ದಿ ಸಿದ್ಧಾರ್ಥ ಶಂಕರ್ ರಾಯ್, ಹಿರಿಯ ಬರಹಗಾರ ಡಾ. ಕರಣ್ ಸಿಂಗ್, ಶೀಲಾ ಕೌಲ್, ಕೆ.ಸಿ. ಪಂತ್, ಕರ್ನಾಟಕದ ಎಸ್.ಆರ್. ಬೊಮ್ಮಾಯಿ, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಯಾರೂ ಇಲಾಖೆಯನ್ನು ಈ ಮಟ್ಟಕ್ಕೆ ಕುಸಿಯಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಹಿರಿಯ ಕಾಂಗ್ರೆಸ್ ಮುಖಂಡ ಅರ್ಜುನ್ ಸಿಂಗ್ ಎಂಟು ವರ್ಷಗಳ ಕಾಲ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಂತ್ರಿಯಾಗಿದ್ದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾನಿಲಯ ಸೇರಿದಂತೆ ಹಲವಾರು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಐಐಟಿಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದವು. ಕುಲಪತಿ ಅಥವಾ ಸಂಸ್ಥೆಗಳ ಮುಖ್ಯಸ್ಥರ ನೇಮಕಾತಿಯಲ್ಲಿ ಪ್ರತಿಭೆಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿತ್ತು. ಆದರೆ ನರೇಂದ್ರ ಮೋದಿ ಸರಕಾರ ಬಂದ ಮೇಲೆ ನಾಲ್ಕೆಂಟು ಜನ ಆರೆಸ್ಸೆಸ್ ಶಿಫಾರಸ್‌ನ ಮೇಲೆ ನೇಮಕಗೊಳ್ಳುತ್ತಾರೆ. ಉಳಿದವರು ಪೇಮೆಂಟ್ ಕೊಟ್ಟು ಹುದ್ದೆ ಪಡೆದುಕೊಳ್ಳುತ್ತಾರೆ. ಹಾಗೆ ನೇಮಕಗೊಂಡವರು ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿಯಿಂದ ಎಲ್ಲದರಲ್ಲೂ ಹಣ ಮಾಡಲು ನಿಲ್ಲುತ್ತಾರೆ. ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯಗಳನ್ನು ಬಡತನದ ಕೂಪಕ್ಕೆ ತಳ್ಳಿದ್ದೇ ಬಿಜೆಪಿಯ ಸಿ.ಎನ್. ಅಶ್ವಥ್ ನಾರಾಯಣ ಉನ್ನತ ಶಿಕ್ಷಣ ಸಚಿವರಾಗಿದ್ದಾಗ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಧರ್ಮೇಂದ್ರ ಪ್ರಧಾನ್ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ.

ಕಾಕ್ರೋಚ್ ಜನತಾ ಪಕ್ಷ ಮತ್ತು ನೀಟ್ ವಿರೋಧಿ ಹೋರಾಟದಲ್ಲಿ ಸೇರಿಕೊಂಡ ಕಾಂಗ್ರೆಸ್ ಆದಿಯಾಗಿ ಎಲ್ಲರೂ ನೀಟ್ ನೆಪವಾಗಿಟ್ಟುಕೊಂಡು ಇಡೀ ಶಿಕ್ಷಣ ವ್ಯವಸ್ಥೆಯನ್ನು ಶುದ್ಧೀಕರಿಸಲು ಮುಂದಾಗಬೇಕು. ನೀಟ್ ನಂಥ ಅಸಂಖ್ಯಾತ ಪ್ರವೇಶ ಪರೀಕ್ಷೆಗಳು ಭ್ರಷ್ಟಾಚಾರ ಮಾಡುವವರಿಗೆ ಕಾಮಧೇನುವಾಗಿ ಪರಿಣಮಿಸಿವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವುದು ಯುವ ಸಮುದಾಯದ ಬೇಡಿಕೆ. ಅವರ ರಾಜೀನಾಮೆಯಿಂದಲೇ ಸುಧಾರಣೆಯ ಪರ್ವ ಶುರುವಾಗಬೇಕು. ‘‘ನಾನು ತಿನ್ನುವುದಿಲ್ಲ, ಬೇರೆಯವರಿಗೆ ತಿನ್ನಲು ಬಿಡುವುದಿಲ್ಲ’’ ಎಂಬ ನರೇಂದ್ರ ಮೋದಿಯವರ ಮಾತು ಈಗ ಸವಕಲಾಗಿದೆ. ಇಡೀ ಶಿಕ್ಷಣ ಇಲಾಖೆಯೇ ಭ್ರಷ್ಟರ ತಾಣವಾಗಿದೆ. ಸಂಪುಟ ದರ್ಜೆಯ ಸಚಿವ ಧರ್ಮೇಂದ್ರ ಪ್ರಧಾನ್, ಸಹಾಯಕ ಸಚಿವರಾದ ಸುಕಾಂತ ಮುಜುಮದಾರ್, ಜಯಂತ್ ಚೌದರಿ ನೈತಿಕ ಹೊಣೆ ಹೊತ್ತು ಹೊರ ಹೋಗಬೇಕು. ನೀಟ್ ಪ್ರವೇಶ ಪರೀಕ್ಷೆಯ ಸೋರಿಕೆ ಆಕಸ್ಮಿಕವಲ್ಲ. ಅದೊಂದು ವ್ಯವಸ್ಥಿತ ದಂಧೆ. ಅಧಿಕಾರದಲ್ಲಿರುವವರ ಸೂಚನೆಯ ಮೇರೆಗೆ ನಡೆದಿರಬಹುದು. ಭ್ರಷ್ಟ ಕುಲಪತಿಗಳನ್ನು ನೇಮಿಸಿದ ಮಂತ್ರಿಯೇ ಭ್ರಷ್ಟ ವ್ಯವಸ್ಥೆಯ ಪೋಷಣೆ ಮಾಡಿರುತ್ತಾರೆ. ಯುವ ಸಮುದಾಯದ ಆಕ್ರೋಶ ಮೋದಿ ಅಧಿಕಾರಾವಧಿಯ ಕೊನೆಯ ದಿನಗಳ ಸೂಚಕದಂತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News