ಕಲಬುರಗಿ | 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬಸವರಾಜ ಅವರಿಗೆ ಅಧಿಕೃತ ಆಹ್ವಾನ
ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದ ಅಂಗಳದಲ್ಲಿ ನ. 15ರಂದು ನಡೆಯಲಿರುವ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿದ್ಧಲಿಂಗೇಶ್ವರ ಪ್ರಕಾಶನದ ಪ್ರಕಾಶಕರೂ, ಪುಸ್ತಕೋದ್ಯಮಿಯೂ ಆದ ಡಾ.ಬಸವರಾಜ ಕೊನೇಕ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ, ಅಧಿಕೃತವಾಗಿ ಆಹ್ವಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಡಾ.ಬಸವರಾಜ ಕೊನೇಕ ಅವರಿಗೆ ಮೈಸೂರು ಪೇಟ ತೊಡಿಸಿ, ಹಾರ ಮತ್ತು ಶಾಲು ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ಭಾಷೆ ಹಾಗೂ ಪ್ರಕಾಶನ ಲೋಕಕ್ಕೆ ಡಾ. ಬಸವರಾಜ ಕೊನೇಕ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಸಾಹಿತ್ಯದಲ್ಲಿನ ಜ್ಞಾನಸಂಪತ್ತು ಎಲ್ಲರಿಗೂ ತಲುಪಬೇಕಾದರೆ ಪುಸ್ತಕಗಳ ಪ್ರಕಟಣೆ ಬಹಳ ಮುಖ್ಯ. ಇದರಿಂದ ಜನರಲ್ಲಿ ಓದುವ ಹವ್ಯಾಸವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೊನೇಕ ಅವರು ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಬರಹಗಾರರ ಸಾಹಿತ್ಯ ಕೃತಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತವೆ ಎಂದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಡಾ. ಬಸವರಾಜ ಕೊನೇಕ, ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಮಾತೃಭಾಷೆಯ ಕಲಿಕೆ ಮುಖ್ಯವಾಗಿದ್ದು, ಅದರ ಮೂಲಕ ಕನ್ನಡದ ಅಭಿವೃದ್ಧಿ ಸಾಧ್ಯವಾಗುತ್ತದೆ. ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ 1974ರಲ್ಲಿ ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ ಆರಂಭಿಸಿ, ಬಳಿಕ 2002ರಲ್ಲಿ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದೆ. ಈ ಭಾಗದ ಯುವ ಬರಹಗಾರರನ್ನು ಪ್ರೋತ್ಸಾಹಿಸಿ ಅವರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಕಾಶಕರ ಕೊಡುಗೆ ಮಹತ್ವದ್ದಾಗಿದೆ. ನಾಡು-ನುಡಿಗಾಗಿ ಸಲ್ಲಿಸುತ್ತಿರುವ ಸೇವೆ ತೃಪ್ತಿ ತಂದಿದೆ. ಹೊಸ ಆಲೋಚನೆಗಳು ಹಾಗೂ ವಿಭಿನ್ನ ಪ್ರಯೋಗಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಹೊಸ ದಿಕ್ಕಿನತ್ತ ಸಾಗುತ್ತಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಪುಸ್ತಕ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿರುವ ತಮ್ಮನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಿವಲೀಲಾ ಕಲಗುರ್ಕಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಪ್ರಮುಖರಾದ ಮುಡುಬಿ ಗುಂಡೇರಾವ, ಡಾ. ಶ್ರೀಶೈಲ್ ನಾಗರಾಳ, ಡಾ. ಚಿ.ಸಿ. ನಿಂಗಣ್ಣ, ಡಾ. ಗವಿಸಿದ್ದ ಪಾಟೀಲ, ಡಾ. ಜಯದೇವಿ ಗಾಯಕವಾಡ, ಅಮೃತಪ್ಪ ಅಣೂರ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ, ಪರಮಾನಂದ ಸರಸಂಬಿ, ಮಹಾಲಿಂಗಯ್ಯ ಸ್ವಾಮಿ, ಪ್ರಭವ ಪಟ್ಟಣಕರ್, ಸಂಗಣ್ಣ ಚೋರಗಸ್ತಿ, ಪತ್ರಕರ್ತರಾದ ಪ್ರಭಾಕರ ಜೋಶಿ, ಶೇಷಮೂರ್ತಿ ಅವಧಾನಿ, ಮನೋಜಕುಮಾರ ಗುದ್ದಿ, ಡಾ. ಶಿವರಂಜನ ಸತ್ಯಂಪೇಟೆ, ಲಲಿತಾ ಪಾಟೀಲ, ಮಹಾನಂದಾ ಹುಲಿ, ಭುವನೇಶ್ವರಿ ಹಳ್ಳಿಖೇಡ, ಶಾರದಾ, ಸುನೀತಾ, ರವಿ ಶಹಾಪೂಕರ್, ಹಣಮಂತ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ, ಸಿದ್ಧಲಿಂಗ ಬಾಳಿ, ಈರಣ್ಣ ಸೋನಾರ, ರಾಜಶೇಖರ ಚಿಂಚೋಳಿ, ವಿನೋದಕುಮಾರ ಜೇನವೇರಿ, ಗಣೇಶ ಚಿನ್ನಾಕಾರ, ರೇಣುಕಾ ಎನ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.