ಕಲಬುರಗಿ: ಗ್ರಾಮೀಣ ಸಮುದಾಯಗಳ ಅಭಿವೃದ್ಧಿ, ಸಾಮಾಜಿಕ ನಾವೀನ್ಯತೆ ಹಾಗೂ ಸ್ವಾವಲಂಬಿ ಗ್ರಾಮಗಳ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಎನ್‌ಬಿಸಿಸಿ ಪ್ರಾಯೋಜಿತ ಸ್ವಾವಲಂಬಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಆರಂಭಿಸಿದೆ.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಗ್ರಾಮೀಣ ಪ್ರದೇಶಗಳ ನೈಜ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳಬೇಕು. ವಿಶ್ವವಿದ್ಯಾಲಯ ಮತ್ತು ಗ್ರಾಮಗಳ ನಡುವಿನ ಸಹಭಾಗಿತ್ವದಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

‘ಕಲಿಯುತ್ತಲೇ ಗಳಿಸಿ’ ಯೋಜನೆಯಡಿ ವಿವಿಧ ಅಧ್ಯಯನ ವಿಭಾಗಗಳ 64 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನ ಒಂದೂವರೆ ಗಂಟೆ ಯೋಜನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಅವರಿಗೆ ಮಾಸಿಕ 3,000 ರೂ. ಗೌರವಧನ ನೀಡಲಾಗುತ್ತದೆ.

ಸಮುದಾಯ ಸೇವೆ, ಪರಿಸರ ಸಂರಕ್ಷಣೆ, ಉದ್ಯಮಶೀಲತೆ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಆಧಾರಿತ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದಾರೆ. ಶಾಲಾ ಮಕ್ಕಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಬೋಧಿಸುವುದು, ಗ್ರಾಮೀಣ ಯುವಕರು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವುದು, ಡಿಜಿಟಲ್ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ ರೂಪಿಸುವುದು ಪ್ರಮುಖ ಚಟುವಟಿಕೆಗಳಾಗಿವೆ.

ಯೋಜನೆಯ ಪ್ರಧಾನ ಸಂಶೋಧಕ ಪ್ರೊ. ಚನ್ನವೀರ ಆರ್.ಎಂ. ಮಾತನಾಡಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವತಾವಾದದ ತತ್ವದಿಂದ ಪ್ರೇರಣೆ ಪಡೆದಿರುವ ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಳ್ಳಲು ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಿದೆ ಎಂದರು.

ವಿವಿಧ ವಿಭಾಗಗಳ ಅಧ್ಯಾಪಕರಾದ ಪ್ರೊ. ಬಸವರಾಜ್ ಕುಬಕಡ್ಡಿ, ಡಾ. ಓಯಿನಮ್ ಬೆಡಾಜಿತ್, ಡಾ. ಸುರೇಶ್ ಅನುಗಂಟಿ, ಡಾ. ಗುರುರಾಜ್ ಮುಕರಂಬಿ ಹಾಗೂ ಡಾ. ಜಯಂತ ಬೊರುವಾ ಅವರ ಮಾರ್ಗದರ್ಶನದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ವಿದ್ಯಾರ್ಥಿಗಳು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಕಾರ್ಯಸಾಧ್ಯವಾದ ಪರಿಹಾರಗಳನ್ನು ರೂಪಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor