Afzalpur | 15 ಟಿಎಂಸಿ ನೀರಿಗಾಗಿ ಪ್ರತಿಭಟನೆ; ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪಾದಯಾತ್ರೆ
ಅಫಜಲಪುರ : ಐದು ದಶಕಗಳು ಕಳೆದರೂ ಇಲ್ಲಿವರೆಗೂ ನಮ್ಮ ಹಕ್ಕಿನ ನೀರು ಪಡೆಯಲು ನಮಗೆಲ್ಲರಿಗೂ ಸಾಧ್ಯವಾಗಿಲ್ಲ. ಇನ್ನಾದರೂ ನಾವೆಲ್ಲರೂ ಒಂದಾಗಿ ನಮ್ಮ ಹಕ್ಕಿನ ನೀರು ಪಡೆಯಲು ಒಂದಾಗಿ ಹೋರಾಟ ಮಾಡಬೇಕಿದೆ. ಈಗ ರೈತ ಮುಖಂಡರು ಹಮ್ಮಿಕೊಂಡಿರುವ ಪಾದಯಾತ್ರೆಗೆ ಹಳ್ಳಿಹಳ್ಳಿಯಿಂದ ರೈತರು ಆಗಮಿಸಿ ಬೆಂಬಲಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಳ್ಳಗಿ(ಬಿ) ಗ್ರಾಮದಲ್ಲಿ ಅಫಜಲಪುರ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಒಗ್ಗಟ್ಟಾಗಿ ನೀರಿಗಾಗಿ ಹೋರಾಟ ಮಾಡಬೇಕು. ರೈತರು ಹೋರಾಟ ಮಾಡಿದರೆ ಮಾತ್ರ ಸರಕಾರಗಳು ಸ್ಪಂದಿಸಿ, ರೈತರ ಬೇಡಿಕೆಗಳನ್ನು ಪೂರೈಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ. ಈ ಪಾದಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.
ಶಾಂತಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಅನ್ನದಾತ ಉಳಿದರೆ ಜಗತ್ತು ಉಳಿಯುತ್ತದೆ. ಶ್ರೀಮಂತನ ಬಳಿ ಎಷ್ಟೇ ಕೋಟಿ ಹಣ, ಚಿನ್ನ, ಬೆಳ್ಳಿ ಇದ್ದರೂ ಕೂಡ ಕೊನೆಗೆ ರೈತ ಬೆಳೆದ ಅನ್ನವನ್ನೇ ತಿನ್ನಬೇಕು. ಹೀಗಾಗಿ ರೈತರಿಗೆ ಬೆಂಬಲಿಸುವ ಕೆಲಸ ಎಲ್ಲರಿಂದಲೂ ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಯಬೇಕಿದೆ. ಭೀಮಾ ನದಿ ನೀರಿಗಾಗಿ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಪಾದಯಾತ್ರೆ ಹಮ್ಮಿಕೊಂಡಿರುವುದರಿಂದ ಈಗಲಾದರೂ ಸರಕಾರಗಳು ಸ್ಪಂದಿಸಿ ನಮ್ಮ ಬೇಡಿಕೆಗಳು ಪೂರೈಸಬೇಕು ಎಂದರು.
ರೈತ ಮುಖಂಡ ಶ್ರೀಮಂತ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾರಾಷ್ಟ್ರ ಸರಕಾರ ಅನಧಿಕೃತವಾಗಿ ಉಜನಿ ಜಲಾಶಯದಿಂದ ನಮಗೆ ಬರಬೇಕಾದ ನೀರಿನ ಪಾಲು ಸೀನಾ ನದಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದರಿಂದ ಬಚಾವತ್ ಆಯೋಗದ ತೀರ್ಪಿನ ಪ್ರಕಾರ ನಮ್ಮ ಹಕ್ಕಿನ ನೀರು ನಮಗೆ ಸಿಗುತ್ತಿಲ್ಲ. ಈ ಬಗ್ಗೆ ಮಹಾರಾಷ್ಟ್ರ ಸರಕಾರದ ಮೇಲೆ ಒತ್ತಡ ಹಾಕಲು ನಮ್ಮ ರಾಜ್ಯದ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುವುದಿಲ್ಲ, ಹೀಗಾಗಿ ಪಾದಯಾತ್ರೆ ಮಾಡಬೇಕಾಗಿದೆ. ಅಳ್ಳಗಿ(ಬಿ) ಗ್ರಾಮದಿಂದ ಹೊರಟ ಪಾದಯಾತ್ರೆ ರಾಜ್ಯ ಹೆದ್ದಾರಿ ಉದ್ದಕ್ಕೂ ಇರುವ ಗ್ರಾಮಗಳಲ್ಲಿನ ರೈತರಿಗೆ ಜಾಗೃತಿ ಮೂಡಿಸುತ್ತಾ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಈ ರೈತರ ಪಾದಯಾತ್ರೆ ಹೊರಟಿದೆ. ಈ ಬಾರಿಯಾದರೂ ನಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲೇಬೇಕು, ಒಂದು ವೇಳೆ ಸ್ಪಂದಿಸದಿದ್ದರೆ ಇನ್ನಷ್ಟು ಹೋರಾಟ ಅಥವಾ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾವೇರಿ ನದಿಯಂತೆ ನಮ್ಮ ಭಾಗದ ಜೀವನದಿ ಭೀಮಾನದಿಗೆ ಸರಕಾರಗಳು ಮುತುವರ್ಜಿ ವಹಿಸಬೇಕು. ಈ ಭಾಗದ ರೈತರು,ಹೋರಾಟಗಾರರು ಭೀಮಾನದಿ ಉಳಿವಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಈಗಲಾದರೂ ಸ್ಪಂದಿಸಿ ನಮ್ಮ ರೈತರಿಗೆ ನ್ಯಾಯ ಒದಗಿಸಿ ನಮ್ಮ ಜೀವನದಿಗೆ ಜೀವ ತುಂಬಿಸುವ ಕೆಲಸ ಆಗಬೇಕು.
ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಅಫಜಲಪುರ.
ಈ ಸಂದರ್ಭದಲ್ಲಿ ಅಭಿನವ ಪುಂಡಲಿಂಗ ಮಹಾರಾಜರು, ಕೈಲಾಸಲಿಂಗ ಶಿವಾಚಾರ್ಯರು, ಅಭಿನವ ಗುರು ಬಸವ ಶಿವಾಚಾರ್ಯರು, ಮುಖಂಡರಾದ ಶಂಕರ ಮ್ಯಾಕೇರಿ, ರಝಾಕ್ ಪಟೇಲ್, ರಮೇಶ ಪಾಟೀಲ್, ಚಂದ್ರಶೇಖರ ಕರಜಗಿ, ಚಿದಾನಂದ ಹಿರೇಮಠ, ಶಾಂತು ಅಂಜುಟಗಿ, ದೇವಣ್ಣ ಕಿರಸಾವಳಗಿ, ಮುರುಘೇಂದ್ರ ಮಸಳಿ, ಗುರು ಚಾಂದಕವಟೆ, ನಾಗರಾಜ ಬುಜರಿ, ನೂರ ಅಹ್ಮದ್ ಬಾಗವಾನ, ಸಿದ್ದು ಮಗಿ, ಮಲ್ಲಿಕಾರ್ಜುನ ನಿಂಗದಳ್ಳಿ, ಬಸಣ್ಣ ಗುಣಾರಿ, ಶಿವಪುತ್ರಪ್ಪ ಸಂಗೋಳಗಿ, ಅಪ್ಪಾಶ ಕಣ್ಣಿ, ಪ್ರಭಾವತಿ ಮೇತ್ರೆ, ಅಬ್ಬಾಸಲಿ ನದಾಪ್, ಹಣಮಂತ ಸೂರಗೊಂಡ,ಮಹಾಂತು ಬಿರಾದಾರ,ಪುಂಡಲಿಕ್ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೇಡಿಕೆಗಳು:
(1)ಉಜನಿ ಜಲಾಶಯದ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸಬೇಕು.
(2)ಕಬ್ಬಿಗೆ ಪ್ರತಿ ಟನ್ ಗೆ 5500 ರೂ.ಬೆಲೆ ನಿಗದಿಪಡಿಸಬೇಕು.
(3) ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸಬೇಕು.