ಅಫಜಲಪುರ: ಹಾಸ್ಟೆಲ್‌ಗಳ ಬಲವರ್ಧನೆ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಹಾಗೂ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಅಫಜಲಪುರ ತಾಲ್ಲೂಕು ಘಟಕದ 3ನೇ ತಾಲ್ಲೂಕು ಸಮ್ಮೇಳನ ನಡೆಯಿತು.

ಸಮ್ಮೇಳನದ ಅಂಗವಾಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಎಸ್‌ಎಫ್‌ಐ ವತಿಯಿಂದ ತಾಲ್ಲೂಕಿನ ಹಾಸ್ಟೆಲ್‌, ಶಾಲಾ-ಕಾಲೇಜುಗಳಲ್ಲಿನ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮನವಿ ಸ್ವೀಕರಿಸಿದರು.

ನಂತರ ಬಸವಣ್ಣ ವೃತ್ತದ ಮೂಲಕ ಶಾರದಾ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಿತು. ಈ ವೇಳೆ ವಿದ್ಯಾರ್ಥಿಗಳ ಹಕ್ಕುಗಳು ಹಾಗೂ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಲಾಯಿತು.

ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಬಹಿರಂಗ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಉಪನಿರ್ದೇಶಕ ಶಿವಶರಣ ಮುಳೆಗಾಂವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಬೇಕು. ಶಿಕ್ಷಣದ ಜೊತೆಗೆ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.

ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್‌ಎಫ್‌ಐ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಹಾಸ್ಟೆಲ್‌, ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹೋರಾಟ ರೂಪಿಸಲಾಗಿದೆ. 371(ಜೆ) ಅಡಿಯಲ್ಲಿ ಮೀಸಲಾದ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಕವಾಗಿ ಬಳಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಡಿವೈಎಫ್‌ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ್ ಮಾತನಾಡಿ, ಸಮಸ್ಯೆಗಳ ಪರಿಹಾರಕ್ಕಾಗಿ ವಿದ್ಯಾರ್ಥಿಗಳು ಸಂಘಟನೆಯೊಂದಿಗೆ ಒಗ್ಗಟ್ಟಿನಿಂದ ಮುನ್ನಡೆಯಬೇಕು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಸಮ್ಮೇಳನದಲ್ಲಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಸರ್ವೇಶ್ ಮಾವಿನಕರ್, ಜಿಲ್ಲಾ ಕಾರ್ಯದರ್ಶಿ ಸುಜಾತಾ, ರಾಜ್ಯ ಸಮಿತಿ ಸದಸ್ಯ ಇಮಾಮ್ ನದಾಫ್, ವಿದ್ಯಾರ್ಥಿ ನಾಯಕ ಪ್ರದೀಪ್ ಮ್ಯಾಗಡಿ, ಸಾಹಿತಿ ಬಿ.ಎಂ. ರಾವ್, ಅಬ್ಬಾಸಲಿ ನದಾಫ್, ನಾಮದೇವ ಕಡಕೋಳ, ಭೀಮರಾವ್ ಗೌರ, ರಮೇಶ್ ಪಾಟೀಲ್, ಶ್ರೀಮಂತ ಬಿರಾದಾರ್, ಶಶಿಕಾಂತ್ ಪತ್ತಾರ್, ಶರಣಬಸಪ್ಪ ವಾಲಿಕರ್, ಬಿಲಾಲ್ ಅಹ್ಮದ್, ಗುರು ಚಂದಕವಟೆ, ಸಿಐಟಿಯು ಮುಖಂಡರಾದ ಶಾಂತಾ ಘಂಟೆ, ರವಿ ಗೌರ ಹಾಗೂ ರಾಜಕುಮಾರ್ ಬಳ್ಳೂರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಎಸ್‌ಎಫ್‌ಐ ಅಫಜಲಪುರ ತಾಲ್ಲೂಕಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಿಠೋಬಾ ಜಾಧವ ಹಾಗೂ ಕಾರ್ಯದರ್ಶಿಯಾಗಿ ಶ್ರೀನಿವಾಸ ಆಯ್ಕೆಯಾಗಿದ್ದಾರೆ. 11 ಪದಾಧಿಕಾರಿಗಳು ಸೇರಿದಂತೆ ಒಟ್ಟು 25 ಸದಸ್ಯರ ನೂತನ ತಾಲ್ಲೂಕು ಸಮಿತಿಯನ್ನು ರಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor