ಅಫಜಲಪುರ: ಯುವ ನಾಯಕರಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ಕೆಲಸವನ್ನು ಶಾಸಕ ಎಂ.ವೈ. ಪಾಟೀಲ್ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಾರ್ಥ ಬಸರಿಗಿಡ ಅವರನ್ನು ಸರ್ಕಾರ ಕಿಯೋನಿಕ್ಸ್ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ ಎಂದು ಯುವ ಮುಖಂಡರಾದ ಚಂದ್ರಕಾಂತ ಸಿಂಗೆ ಹಾಗೂ ಡಾ. ಉದಯಕುಮಾರ ವಾಡೆಕರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ ಬಸರಿಗಿಡ ಅವರು ವಿದ್ಯಾರ್ಥಿ ಜೀವನದಿಂದಲೇ ಹೋರಾಟ, ಸಂಘಟನೆ ಹಾಗೂ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ವಿವಿಧ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು, ಎಲ್ಲರ ಪ್ರೀತಿ ಹಾಗೂ ವಿಶ್ವಾಸ ಗಳಿಸಿದ್ದಾರೆ ಎಂದು ತಿಳಿಸಿದರು.

ಮತ್ತೊಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಜನಸೇವೆ ಮುಂದುವರಿಸುವ ಅವಕಾಶ ಅವರಿಗಿತ್ತು. ಆದರೆ ಮೀಸಲಾತಿ ಬದಲಾವಣೆಯಿಂದಾಗಿ ಆ ಅವಕಾಶ ಕೈತಪ್ಪಿದ್ದು, ಅವರ ಬೆಂಬಲಿಗರು ಹಾಗೂ ಸಮುದಾಯದವರಲ್ಲಿ ನಿರಾಸೆ ಮೂಡಿಸಿತ್ತು. ಇದೀಗ ಶಾಸಕ ಎಂ.ವೈ. ಪಾಟೀಲ್ ಅವರು ಬಸರಿಗಿಡ ಅವರ ಸಂಘಟನಾ ಸಾಮರ್ಥ್ಯ ಹಾಗೂ ಸೇವಾ ಮನೋಭಾವವನ್ನು ಗುರುತಿಸಿ, ಸರ್ಕಾರದ ಮಟ್ಟದಲ್ಲಿ ಶಿಫಾರಸು ಮಾಡುವ ಮೂಲಕ ಕಿಯೋನಿಕ್ಸ್ ನಿರ್ದೇಶಕ ಸ್ಥಾನ ದೊರಕಿಸಿಕೊಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಶಾಸಕ ಎಂ.ವೈ. ಪಾಟೀಲ್ ಅವರು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಯುವ ಕಾರ್ಯಕರ್ತರಿಗೆ ವಿವಿಧ ಜವಾಬ್ದಾರಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ರಾಜಕೀಯದಲ್ಲಿ ದೀರ್ಘಕಾಲದಿಂದ ದುಡಿಯುತ್ತಿರುವವರಿಗೆ ಸೂಕ್ತ ಮನ್ನಣೆ ದೊರೆಯಬೇಕು ಎಂಬ ಆಶಯಕ್ಕೆ ಈ ನೇಮಕಾತಿ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ನೂತನ ಜವಾಬ್ದಾರಿ ವಹಿಸಿಕೊಂಡಿರುವ ಸಿದ್ದಾರ್ಥ ಬಸರಿಗಿಡ ಅವರು ತಮ್ಮ ಅನುಭವ ಹಾಗೂ ಸಂಘಟನಾ ಸಾಮರ್ಥ್ಯದೊಂದಿಗೆ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಲಿ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಉನ್ನತ ಜವಾಬ್ದಾರಿಗಳು ದೊರೆಯಲಿ ಎಂದು ಚಂದ್ರಕಾಂತ ಸಿಂಗೆ ಹಾಗೂ ಡಾ. ಉದಯಕುಮಾರ ವಾಡೆಕರ ಶುಭ ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor