Aland | ಬೆಳೆ ವಿಮೆ ಬಿಡುಗಡೆ, ಬರ ಘೋಷಣೆಗೆ ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಆಳಂದ: ಬೆಳೆ ವಿಮೆಯ ಎರಡನೇ ಕಂತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಆಳಂದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ತಾಲೂಕಿನ ಗಡಿಭಾಗದ ಖಜೂರಿ ಗ್ರಾಮದ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರಸ್ತೆ ಸಂಚಾರ ತಡೆದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಳಿಕ ನಾಡ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಿದರು.
2025-26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಖಜೂರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 3,000 ಎಕರೆ ಪ್ರದೇಶದ 1,600ಕ್ಕೂ ಅಧಿಕ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಮಧ್ಯಂತರ ಪರಿಹಾರದ ಮೊದಲ ಕಂತಿನ ಹಣ ಕೆಲವು ರೈತರ ಖಾತೆಗಳಿಗೆ ಜಮೆಯಾಗಿದ್ದರೂ, ಎರಡನೇ ಕಂತಿನ ವಿಮೆ ಹಣ ಇದುವರೆಗೆ ಜಮೆಯಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಮರ್ಪಕ ಮಾಹಿತಿ ನೀಡದೆ, ವಿಮೆ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಖಜೂರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಖಾತೆಗಳಿಗೆ ಹಣ ಬಂದಿಲ್ಲ. ಬೆಳೆ ಕಟಾವು ಸಮೀಕ್ಷೆಯ ಅರ್ಹತೆ ಇಲ್ಲ ಎಂಬ ಕಾರಣ ನೀಡಲಾಗುತ್ತಿದ್ದು, ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದೆ ರೈತರು ಹಾಗೂ ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಆಳಂದ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡಬೇಕು, ಬೆಳೆ ವಿಮೆಯ ಎರಡನೇ ಕಂತಿನ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು, ರೈತರ ಸಾಲಮನ್ನಾ ಮಾಡಬೇಕು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ತಕ್ಷಣ ಆರಂಭಿಸಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂದು ರೈತರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಚಿತಾನಂದ ಧೋಳೆ, ರೇವಣಸಿದ್ಧಪ್ಪ ಚಂಗಳೆ, ಬಸವರಾಜ ಅಲ್ದಿ, ಕುಮಾರ ಬಂಡೆ, ಗುರುಬಸಪ್ಪ ಢಗೆ, ಅರವಿಂದ ಅಲ್ದೆ, ನಾಗೇಶ ನಗರೆ, ಸಂಗನಬಸಪ್ಪ ವಾನೆಗಾಂವ, ಕರಬಸಪ್ಪ ವಾಡೆ, ಸಿದ್ಧರಾಮ ಘಂಟೆ, ಗಾಂಧಿ ಹಳ್ಳೆ, ಮಹಾದೇವ ವಾಡೆ, ಶಿವಪ್ಪ ಘಂಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.