Kalaburagi | ಕೆಕೆಆರ್‌ಟಿಸಿಗೆ 152 ಕೋಟಿ ರೂ. ವೆಚ್ಚದಲ್ಲಿ 400 ಹೊಸ ಬಸ್‌ಗಳ ಖರೀದಿಗೆ ಸಚಿವ ಸಂಪುಟ ಅನುಮೋದನೆ

Update: 2026-08-14 18:05 IST

ಎಂ.ವೈ.ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) 152 ಕೋಟಿ ರೂ. ವೆಚ್ಚದಲ್ಲಿ 400 ನೂತನ ಬಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಸರ್ಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿರುವ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ ಅವರು, ನಿಗಮದ ಪರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಹಾಲಿ ಅನುಸೂಚಿಗಳ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ಬಸ್‌ಗಳ ಲಭ್ಯತೆ ಇಲ್ಲದೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದೀಗ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, 400 ಹೊಸ ಬಸ್‌ಗಳ ಖರೀದಿಗೆ ಹಾದಿ ಸುಗಮವಾಗಿದೆ ಎಂದು ಅರುಣಕುಮಾರ ಪಾಟೀಲ ತಿಳಿಸಿದ್ದಾರೆ.

ಒಟ್ಟು 152 ಕೋಟಿ ರೂ. ವೆಚ್ಚದಲ್ಲಿ ಶೇ.50ರಷ್ಟು ಮೊತ್ತವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಉಳಿದ ಶೇ.50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ. ಅನುದಾನವನ್ನು ಹಂತ ಹಂತವಾಗಿ ಬಳಸಿಕೊಳ್ಳಲಾಗುವುದು.

ಹೊಸ ಬಸ್‌ಗಳ ಸೇರ್ಪಡೆಯಿಂದ ಕಲ್ಯಾಣ ಕರ್ನಾಟಕದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರಯಾಣಿಕರಿಗೆ ಮತ್ತಷ್ಟು ಸುಗಮ, ಸುರಕ್ಷಿತ ಮತ್ತು ಸಮರ್ಪಕ ಸಾರಿಗೆ ಸೇವೆ ದೊರೆಯಲಿದೆ. ಬಸ್‌ಗಳ ಕೊರತೆಯಿಂದ ಎದುರಾಗುತ್ತಿದ್ದ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News