Aland | ಕೋತನಹಿಪ್ಪರಗಾ ಶ್ರೀ ಶರಣಬಸವೇಶ್ವರ ಜಾತ್ರೆ ರಥೋತ್ಸವ ಸಂಭ್ರಮ
ಆಳಂದ : ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಶರಣೆ ಸುಂದರಮ್ಮ ತಾಯಿಯ ಪುಣ್ಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಗಿನ ಜಾವದಲ್ಲೇ ಶ್ರೀ ಶರಣಬಸವೇಶ್ವರ ದೇವರ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಭಕ್ತಿಪೂಜೆಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ಮಧ್ಯಾಹ್ನ ಪ್ರಮುಖ ರಸ್ತೆ ಮಾರ್ಗದಲ್ಲಿ ಭವ್ಯ ಪಲ್ಲಕ್ಕಿ ಉತ್ಸವ ಹಾಗೂ ನಂದಿ ಕೋಲ ಉತ್ಸವ ವಿಜೃಂಭಣೆಯಿಂದ ನಡೆಯಿತು. ಬಳಿಕ ರಥೋತ್ಸವ ಸ್ಥಳದಲ್ಲಿ ಆಳಂದ, ನಂದವಾಡಗಿ, ಜಾಲವಾದಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಪೂಜ್ಯ ಡಾ. ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶ್ರೀಗಳು ವಿಧಿವತ್ತಾಗಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಭಕ್ತರು ಭಜನೆ, ಜಯಘೋಷಗಳ ನಡುವೆ ಭಕ್ತಿ ಭಾವದಿಂದ ರಥವನ್ನು ಎಳೆದರು.
ರಥೋತ್ಸವದ ನಂತರ ಪೂಜ್ಯ ಡಾ. ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಅವರು ಭಕ್ತರನ್ನು ಉದ್ದೇಶಿಸಿ ಅಮೃತ ಆಶೀರ್ವಚನ ನೀಡಿದರು.