×
Ad

Kalaburagi | ಮೇ 13ರಿಂದ ಮಾಡಿಯಾಳ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ : ಗಂಗಾಧರ ಶಿರೂರ

Update: 2026-05-12 22:51 IST

ಕಲಬುರಗಿ : ಆಳಂದ ತಾಲೂಕಿನ ಸುಕ್ಷೇತ್ರ ಮಾಡಿಯಾಳ ಗ್ರಾಮದಲ್ಲಿ ನಡೆಯಲಿರುವ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿಯ ಮುಖಂಡ ಗಂಗಾಧರ ಶಿರೂರ ತಿಳಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರಂದು ಸಂಜೆ 5 ಗಂಟೆಗೆ ಶ್ರೀ ಅಮೋಘಸಿದ್ದೇಶ್ವರ ಪಲ್ಲಕ್ಕಿ ಮಾಡಿಯಾಳದಿಂದ ಗಾಣಗಾಪುರದ ಕೂಡಲ ಸಂಗಮಕ್ಕೆ ಪ್ರಯಾಣ ಬೆಳೆಸಲಿದ್ದು, ಮೇ 14ರಂದು ಗಂಗಾಸ್ನಾನ ನೆರವೇರಿಸಿ ಮೇ 15ರಂದು ಗ್ರಾಮಕ್ಕೆ ಮರಳಲಿದೆ ಎಂದು ಹೇಳಿದರು.

ಮೇ 16ರಂದು ಅಮಾವಾಸ್ಯೆ ಪ್ರಯುಕ್ತ ರಾತ್ರಿ ಪೂರ್ತಿ ಗ್ರಾಮದ ಬೀದಿ ಬೀದಿಗಳಲ್ಲಿ ಪಲ್ಲಕ್ಕಿ ಹಾಗೂ ದೇವರ ಮಾಖಗಳ ಮೆರವಣಿಗೆ ನಡೆಯಲಿದ್ದು, ಮೇ 17ರಂದು ನಸುಕಿನ ಜಾವ ಪರಮ ಪೂಜ್ಯ ಶ್ರೀ ಪ್ರಭುರಾಯ ರೇವಪ್ಪ ಮುತ್ಯಾರವರಿಂದ ದೇವರ ಹೇಳಿಕೆ ನುಡಿ (ಅಮೃತ ವಾಣಿ) ನಡೆಯಲಿದೆ ಎಂದರು.

ಜಾತ್ರಾ ನಿಮಿತ್ತ ಮೇ 9ರಿಂದ 15ರವರೆಗೆ ಪ್ರತಿದಿನ ಸಂಜೆ 7ರಿಂದ ರಾತ್ರಿ 10ರವರೆಗೆ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಜೀವನ ಚರಿತ್ರೆ, ಮಹಾಪುರಾಣ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಗಳು ಪೂಜ್ಯರ ಸಾನಿಧ್ಯದಲ್ಲಿ ನಡೆಯಲಿವೆ ಎಂದು ತಿಳಿಸಿದರು.

ಮೇ 15ರಂದು ಸಂಜೆ 7 ಗಂಟೆಗೆ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು, ಮಾಜಿ ಶಾಸಕ ಸುಭಾಷ ಗುತ್ತೇದಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ, ತಾಲೂಕು ಮುಖಂಡರಾದ ಅಶೋಕ ಗುತ್ತೇದಾರ, ವಿಠಲರಾವ ಪಾಟೀಲ, ವೀರಣ್ಣ ಮಂಗಾಣೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2026ನೇ ಸಾಲಿನ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಗ್ರಾಮದ ನಂದಿನಿ ಕಲಶೇಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಯೋಧರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಮೇ 16ರಂದು ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 21 ಸಾಧಕರಿಗೆ “ಶ್ರೀ ಅಮೋಘ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ದೇವೇಂದ್ರ ಮರತೂರ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೆಗಜಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ದಿನ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಎನ್.ಕೆ. ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಮೇ 17ರಂದು ಸಂಜೆ 4 ಗಂಟೆಗೆ ಪೈಲ್ವಾನರಿಂದ ಕುಸ್ತಿ ಸ್ಪರ್ಧೆ ಹಾಗೂ ಮೇ 18ರಂದು ಭೂತಾಳಸಿದ್ದೇಶ್ವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.

ಜಾತ್ರಾ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುತ್ತಣ್ಣ ನಡಗೇರಿ, ಬಸವರಾಜ ಕೌಲಗಿ, ಶಿವಯೋಗಪ್ಪ ಪೂಜಾರಿ, ಮಲಕಾರಿ ಪೂಜಾರಿ ಹಾಗೂ ಶರಣಬಸಪ್ಪ ಕಲಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News