ಎಸ್‌ಐಆರ್ ಪ್ರಕ್ರಿಯೆ ಕುರಿತು ಜಾಗೃತಿ ಅಗತ್ಯ: ಡಾ. ಮುಹಮ್ಮದ್ ಅಸಗರ ಚುಲ್ಬುಲ್
ಕಲಬುರಗಿ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಗ್ಗೆ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗದ ಮತದಾರರು ಹೆಚ್ಚಿನ ಜಾಗರೂಕತೆ ವಹಿಸುವ ಅಗತ್ಯವಿದೆ ಎಂದು ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ನ ಅಂತರಧರ್ಮೀಯ ವಿಭಾಗದ ರಾಷ್ಟ್ರೀಯ ಕಾರ್ಯದರ್ಶಿ ಡಾ. ಮುಹಮ್ಮದ್ ಅಸಗರ ಚುಲ್ಬುಲ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹೊಸದೇನಲ್ಲ. ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತಾ ಬಂದಿದ್ದು, ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ಸ್ವೀಕೃತಿ ಪತ್ರ (ಅಕ್ನಾಲೆಡ್ಜ್‌ಮೆಂಟ್) ಪಡೆಯುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಜೊತೆ ಸಮನ್ವಯ ಸಾಧಿಸಿ ಮನೆಮನೆಗೆ ತೆರಳಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಪ್ರತಿ ಬೂತ್‌ನಲ್ಲಿ ಸ್ಥಳೀಯ ಸ್ವಯಂಸೇವಕರು ಕಾರ್ಯನಿರ್ವಹಿಸಿ ಅರ್ಹ ಮತದಾರರ ಹೆಸರು ಕೈಬಿಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಯುವಕರು, ವಿಶೇಷವಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗೆ ಹೆಚ್ಚಿನ ಹೊಣೆಗಾರಿಕೆ ವಹಿಸಬೇಕು ಎಂದು ಕರೆ ನೀಡಿದ ಅವರು, ಮೊದಲು ತಮ್ಮ ಮತದಾರರ ವಿವರಗಳನ್ನು ಪರಿಶೀಲಿಸಿ ನಂತರ ನೆರೆಹೊರೆಯವರು ಹಾಗೂ ಸಂಬಂಧಿಕರಿಗೂ ಸಹಾಯ ಮಾಡುವಂತೆ ಮನವಿ ಮಾಡಿದರು.