×
Ad

ತಂಬಾಕು ಸೇವನೆಯಿಂದ ಶ್ವಾಸಕೋಶ ದುರ್ಬಲ: ಡಾ.ಶರಣಬಸಪ್ಪ ಗಣಜಲಖೇಡ್

Update: 2026-06-27 20:57 IST

ಕಲಬುರಗಿ: ತಂಬಾಕು ಸೇವನೆಯಿಂದ ಶ್ವಾಸಕೋಶ ದುರ್ಬಲಗೊಳಿಸಿ ಕ್ಷಯ ರೋಗ ಬರುವ ಅಪಾಯವನ್ನು ದುಪ್ಪಟ್ಟು ಮಾಡುತ್ತದೆ. ಈ ಕುರಿತು ಜನಸಮುದಾಯದಲ್ಲಿ ವ್ಯಾಪಕ ಅರಿವು ಮೂಡಿಸಲು ರಾಜ್ಯ ಸರ್ಕಾರವು ವಿಭಾಗೀಯ ಮಟ್ಟದಲ್ಲಿ ವಿಶೇಷ ಅಭಿಯಾನವನ್ನು ತೀವ್ರಗೊಳಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ‌ ವಿಭಾಗೀಯ ಕಚೇರಿಯ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ್ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ತಂಬಾಕು ನಿಯಂತ್ರಣ ಕೋಶ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಟಿಬಿ (ಕ್ಷಯ ರೋಗ) ಮತ್ತು ತಂಬಾಕು ವ್ಯಸನ ಮುಕ್ತ ಏಕೀಕರಣದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಅದರಲ್ಲೂ ಟಿಬಿ ಬಂದಂತಹವರಿಗೆ ಆಪ್ತ ಸಮಾಲೋಚನೆ ಮಾಡುವ ಮೂಲಕ ತಂಬಾಕು ವ್ಯಸನ ಮುಕ್ತ ಸಮಾಜ ಮಾಡಬಹುದಾಗಿದೆ. ಅಪಾಯದ ಕಡಿತಗೊಳಿಸುವಿಕೆ ಜೊತೆಗೆ ಕ್ಷಯ ರೋಗಿಗಳಲ್ಲಿ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ ಎಂದರು.

ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ಟಿಬಿ ರೋಗಿಯನ್ನು ತಂಬಾಕು ವ್ಯಸನದ ಹಿನ್ನೆಲೆಗಾಗಿ ಕಡ್ಡಾಯವಾಗಿ ತಪಾಸಣೆ ಮಾಡುವುದು. ತಂಬಾಕು ಸೇವನೆಯಿಂದ ಕ್ಷಯ ರೋಗವು ಹೇಗೆ ಉಲ್ಬಣಗೊಳ್ಳುತ್ತದೆ ಮತ್ತು ಶೇ. 40 ರಷ್ಟು ಟಿಬಿ ಸಾವುಗಳಿಗೆ ತಂಬಾಕು ಹೇಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಆರೋಗ್ಯ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ‌ ಇಲಾಖೆಯ ವಿಭಾಗೀಯ ಕಚೇರಿಯ ಉಪನಿರ್ದೇಶಕ ಡಾ.ಅಂಬಾರಾಯ್ ರುದ್ರವಾಡಿ ಅವರು ಮಾತನಾಡಿ, ಟಿಬಿ (ಕ್ಷಯ ರೋಗ) ಮತ್ತು ತಂಬಾಕು ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರ ಆರೋಗ್ಯವನ್ನು ಸುಧಾರಿಸಲು ಮತ್ತು ಮಾರಕ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಹಮ್ಮಿಕೊಳ್ಳಲಾದ ಪ್ರಮುಖ ಅಭಿಯಾನವಾಗಿದೆ ಎಂದರು.

ತಂಬಾಕು ಸೇವನೆಯು ಶ್ವಾಸಕೋಶವನ್ನು ದುರ್ಬಲಗೊಳಿಸಿ, ಟಿಬಿ ರೋಗ ಬರುವ ಸಾಧ್ಯತೆಯನ್ನು ಹೆಚ್ಚಿಸುವುದರಿಂದ ಈ ಎರಡೂ ವಿಷಯಗಳ ಬಗ್ಗೆ ಒಟ್ಟಿಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

ಕಾರ್ಯಕ್ರಮದಲ್ಲಿ ಡಬ್ಲ್ಯೂ.ಎಚ್.ಓ ಸಲಹೆಗಾರರು ಹಾಗೂ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಾ. ಅನಿಲಕುಮಾರ ತಾಳಿಕೋಟಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್, ಜಿಲ್ಲಾ ನಿರ್ಮೂಲನಾಧಿಕಾರಿಗಳಾದ ಡಾ. ಚಂದ್ರಕಾಂತ್ ನರಿಬೋಳ, ಡಾ.ಅನಿಲ ಚಿಂತಾಮಣಿ, ವಿಟಲ್ ಸ್ಟ್ರಾಟಜೀಸ್'  ಸಂಸ್ಥೆಯ ರಾಜ್ಯ ಯೋಜನಾ ಅಧಿಕಾರಿ ರಾಜೇಶ್ ಭಾರತೀಯ ಹಾಜರಿದ್ದರು.

ಕಾರ್ಯಗಾರದಲ್ಲಿ ನೂರಾರು ಸಂಖ್ಯೆಯಲ್ಲಿ ಬೀದರ್‌, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯನಗರ, ಕಲಬುರಗಿ ಜಿಲ್ಲೆಯ ಎಲ್ಲಾ ಎನ್.ಟಿ.ಇ.ಪಿ ಕಾರ್ಯಕ್ರಮದ ಡಿಟಿಓ, ಡಿಪಿಎಂ, ಡಿಪಿಎಸ್, ಎಸ್.ಟಿ.ಎಸ್ ಮತ್ತು ಎನ್.ಟಿ.ಸಿ.ಪಿ ಕಾರ್ಯಕ್ರಮದ ಟಿ.ಸಿ.ಸಿ ಆಪ್ತ ಸಮಾಲೋಚಕರು, ಅಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಟಿ.ಸಿ.ಸಿ ಸ್ಯಾಟಲೈಟ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರಾಕೇಶ್ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗೀಯ ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮ ಸಂಯೋಜಕ ಮಹಾಂತೇಶ್ ಉಳ್ಳಾಗಡಿ ನಿರೂಪಿಸಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಸುಜಾತಾ ಪಾಟೀಲ ಸ್ವಾಗತಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News