×
Ad

ಸುಸ್ಥಿರ ಅಭಿವೃದ್ಧಿಯತ್ತ ಜೈವಿಕ ತಂತ್ರಜ್ಞಾನದ ಹೆಜ್ಜೆ: ಪ್ರೊ. ರಾಜಾಸಾಬ್ ಎ. ಎಚ್

Update: 2026-06-20 23:27 IST

ಕಲಬುರಗಿ: ಕೇವಲ ಸಂವೇದನೆ  ಸೃಷ್ಟಿಸುವ ಕಾರ್ಯಕ್ರಮಗಳನ್ನು ಮಾಡಬೇಡಿ. ಜ್ಞಾನವನ್ನು ವೃದ್ಧಿಸುವ, ಸಮಾಜಕ್ಕೆ ಒಳಿತು ಮಾಡುವ ಮತ್ತು ಜ್ಞಾನವನ್ನು ಹಂಚುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಜೈವಿಕ ತಂತ್ರಜ್ಞಾನ  ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ರಾಜಸಾಬ್ ಎ. ಎಚ್ ಅವರು ಹೇಳಿದರು.

ಶನಿವಾರ ಗುಲ್ಬರ್ಗಾ ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ವಿಭಾಗದ 'ಬೋಸ್ ಹಾಲ್'ನಲ್ಲಿ ಆಯೋಜಿಸಿದ ಜೈವಿಕ ತಂತ್ರಜ್ಞಾನ ವಿಭಾಗದ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ 'ಜೈವಿಕ ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು' ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಸಂಸ್ಥೆಯು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಿಗದಿಪಡಿಸಿದೆ. ಕರ್ನಾಟಕ ಸರ್ಕಾರವು ಸಹ ಈ ಗುರಿಗಳ ಬಗ್ಗೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರದರ್ಶನ ಮಂಡಳಿಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಜೈವಿಕ ತಂತ್ರಜ್ಞಾನದ ಮೂಲಕ ಈ 17 ಗುರಿಗಳನ್ನು ತಲುಪಲು ಸಾಧ್ಯವಿದೆ. ಇದು ಸಮಾಜವನ್ನು ಧನಾತ್ಮಕ ದಾರಿಯಲ್ಲಿ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೆರಿ ಮಾತನಾಡಿ, ಜೈವಿಕ ತಂತ್ರಜ್ಞಾನವು ಕೇವಲ ಒಂದು ವಿಷಯಕ್ಕೆ ಸೀಮಿತವಾಗದೆ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಮಹತ್ವದ ಪಾತ್ರ ವಹಿಸುತ್ತದೆ. ಕೃಷಿ, ಆರೋಗ್ಯ, ಮತ್ತು ಪರಿಸರದಂತಹ ವಿಷಯಗಳಲ್ಲಿ ಜೈವಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಅದರ ಪ್ರಭಾವವನ್ನು ತಿಳಿಸಿದರು.

ಮಾನವ ಮತ್ತು ಪ್ರಾಣಿಗಳ ಆರೋಗ್ಯ ರಕ್ಷಣೆ, ರೋಗ ನಿರ್ವಹಣೆ ಹಾಗೂ ವ್ಯಾಕ್ಸಿನೇಷನ್ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನದ ಮಹತ್ವ ಹಾಗೂ ಕೃಷಿ ವಿಜ್ಞಾನ ಮತ್ತು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿಯ ವಿಚಾರ ಸಂಕಿರಣಗಳು ಹೆಚ್ಚಿನ ಪ್ರೇರಣೆ ನೀಡಲಿವೆ. ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಕರು ಮತ್ತು ವಿಜ್ಞಾನಿಗಳು ನೀಡುತ್ತಿರುವ ಕೊಡುಗೆಗಳನ್ನು ಶ್ಲಾಘಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಲಂಡನ್ಕರ್, ಕಾರ್ಯಕ್ರಮದ ಸಹ-ಸಂಚಾಲಕ ಪ್ರೊ. ಕೆಲ್ಮನಿ ಚಂದ್ರಕಾಂತ್ ಆರ್. ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News