×
Ad

ಕಲಬುರಗಿ | ವೈದ್ಯ ವೃತ್ತಿ ಪವಿತ್ರ ಸಾಮಾಜಿಕ ಜವಾಬ್ದಾರಿ: ಡಾ. ವಿಜಯಲಕ್ಷ್ಮಿ ದೇಶಮಾನ್ಯ

Update: 2026-06-20 23:30 IST

ಕಲಬುರಗಿ: ವೈದ್ಯಕೀಯ ವೃತ್ತಿ ಎಂಬುದು ಕೇವಲ ಜೀವನೋಪಾಯದ ಉದ್ಯೋಗವಲ್ಲ, ಅದು ಅತ್ಯಂತ ಪವಿತ್ರವಾದ ಸಾಮಾಜಿಕ ಜವಾಬ್ದಾರಿಯಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡುತ್ತಿರುವ ಯುವ ವೈದ್ಯರು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ಸೇವೆ ಸಲ್ಲಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಹಾಗೂ ಕಿದ್ವಾಯಿ ಸ್ಮಾರಕ ಗ್ರಂಥಿ ರೋಗಗಳ ಸಂಸ್ಥೆಯ ಮಾಜಿ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ದೇಶಮಾನ್ಯ ಹೇಳಿದರು.

ನಗರದ ಸೇಡಂ ರಸ್ತೆಯಲ್ಲಿರುವ ಇಎಸ್‌ಐಸಿ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ನಡೆದ 8ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಎಂಬಿಬಿಎಸ್‌ ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ವೈದ್ಯರಿಗೆ ಆಸ್ಪತ್ರೆಯೇ ದೇಗುಲವಾಗಿದ್ದು, ರೋಗಿಯೇ ದೇವರಾಗಿದ್ದಾರೆ. ವೈದ್ಯರು ಆ ದೇವರ ಸೇವೆ ಮಾಡುವ ಪೂಜಾರಿಗಳಂತೆ ಕಾರ್ಯನಿರ್ವಹಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳ ನೋವನ್ನು ನಿವಾರಿಸುವುದೇ ವೈದ್ಯರ ಮೊದಲ ಆದ್ಯತೆಯಾಗಬೇಕು ಎಂದು ಅವರು ತಿಳಿಸಿದರು.

ವೈದ್ಯರು ಅಹಂಕಾರವನ್ನು ತೊರೆದು, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸತ್ಯ ಮತ್ತು ನೈತಿಕತೆಯ ಹಾದಿಯಲ್ಲಿ ನಡೆಯಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ಕರುಣೆಯಿಂದ ಜನಸೇವೆ ಮಾಡಬೇಕು. ಜೊತೆಗೆ ಸಾಮಾನ್ಯ ಜ್ಞಾನ, ಜಾಗರೂಕತೆ ಹಾಗೂ ಮಾನವೀಯತೆಯೊಂದಿಗೆ ವೃತ್ತಿ ನಿರ್ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ಸಮಾರಂಭದ ಗೌರವ ಅತಿಥಿಯಾಗಿದ್ದ ಐಆರ್‌ಎಸ್‌ ಅಧಿಕಾರಿ ಡಾ. ಸಂತೋಷ್ ಮಂಕೋಸ್ಕರ್ ಮಾತನಾಡಿ, ಎಂಬಿಬಿಎಸ್‌ ಪದವಿ ಪಡೆಯುವುದು ಪರಿಶ್ರಮದ ಅಂತ್ಯವಲ್ಲ, ಸಮಾಜ ಸೇವೆಯ ಹೊಸ ಪಯಣದ ಆರಂಭವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ಡಾ. ಸಂತೋಷ ಕ್ಷೀರಸಾಗರ ಮಾತನಾಡಿ, ಐದು ವರ್ಷಗಳ ಹಿಂದೆ ಪೋಷಕರು ಸಂಸ್ಥೆಯ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಾಲೇಜು ಯಶಸ್ವಿಯಾಗಿ ಉಳಿಸಿಕೊಂಡಿದೆ ಎಂದು ಹೇಳಿದರು.

126 ವಿದ್ಯಾರ್ಥಿಗಳಿಗೆ ಪದವಿ, 17 ಮಂದಿಗೆ ಚಿನ್ನದ ಪದಕ:

ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 126 ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿಗೆ ರ‍್ಯಾಂಕ್‌ ತಂದುಕೊಟ್ಟ ಹಾಗೂ ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 17 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ. ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಪ್ರಶಾಂತ ಪಾಟೀಲ ಹಾಗೂ ಡಾ. ಅನೀಸ್ ಐಶಾ ಉಪಸ್ಥಿತರಿದ್ದರು.

ಪದವಿ ಪಡೆಯಲಿರುವ ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರನ್ನೂ ವೇದಿಕೆಗೆ ಆಹ್ವಾನಿಸಿದ್ದು ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಪೋಷಕರು ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮ ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News