ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬಿಜೆಪಿ ಆರೋಪ ಆಧಾರರಹಿತ : ಡಾ.ಮುಹಮ್ಮದ್ ಅಸ್ಗರ್ ಚುಲ್ಬುಲ್
ಕಲಬುರಗಿ : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಬಿಜೆಪಿ ಹಾಗೂ ಎನ್‌ಡಿಎ ನಾಯಕರು ಮಾಡುತ್ತಿರುವ ಆರೋಪಗಳು ಸಂಪೂರ್ಣ ನಿರಾಧಾರವಾಗಿದ್ದು, ರಾಜಕೀಯ ಉದ್ದೇಶದಿಂದ ಕೋಮುವಾದವನ್ನು ಪ್ರಚೋದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕುಡಾ ಮಾಜಿ ಅಧ್ಯಕ್ಷ ಹಾಗೂ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ (ಎಐಎಂಸಿ) ಮುಖಂಡ ಡಾ.ಮುಹಮ್ಮದ್ ಅಸ್ಗರ್ ಚುಲ್ಬುಲ್ ಆರೋಪಿಸಿದರು.
ನಗರದ ರೋಜಾ ದರ್ಗಾ ಪ್ರದೇಶದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಸ್‌ಐಆರ್ ಕುರಿತು ನೀಡಿರುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು.
ಮಸೀದಿಗಳು ಹಾಗೂ ಸಮುದಾಯ ಭವನಗಳ ಮೂಲಕ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂಬ ಆರೋಪಗಳು ಯಾವುದೇ ಪುರಾವೆಯಿಲ್ಲದ, ಕೋಮುವಾದಿ ಪ್ರೇರಿತ ಹೇಳಿಕೆಗಳಾಗಿವೆ ಎಂದು ಹೇಳಿದರು.
ಆಡಳಿತಾತ್ಮಕ ಪ್ರಕ್ರಿಯೆಯನ್ನು ಧಾರ್ಮಿಕ ದೃಷ್ಟಿಕೋನದಲ್ಲಿ ಬಿಂಬಿಸುವುದು ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂತದ್ದು. ಸಾಮಾನ್ಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿವೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಭಾರತೀಯ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಮಾರ್ಗಸೂಚಿಯಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ. ಮತದಾರರು ಅಗತ್ಯ ದಾಖಲೆಗಳೊಂದಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದ್ದು, ಈ ಪ್ರಕ್ರಿಯೆಗೆ ಎಲ್ಲರೂ ಸಹಕರಿಸಬೇಕು. ಚುನಾವಣಾ ಆಯೋಗವು ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.
ಕೆಲವು ರಾಜ್ಯಗಳಲ್ಲಿ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲಾಗಿರುವ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕರ್ನಾಟಕದ ಮತದಾರರು ಎಚ್ಚರಿಕೆಯಿಂದ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿದ ಬಳಿಕ ಅಧಿಕೃತ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು. ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಯಾವುದೇ ಬಾಹ್ಯ ಒತ್ತಡ ಉಂಟಾದರೆ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಎಂಸಿ ಜಿಲ್ಲಾಧ್ಯಕ್ಷ ಮೌಲಾನಾ ಗೌಸುದ್ದೀನ್ ಖಾಸ್ಮಿ, ಪ್ರಧಾನ ಕಾರ್ಯದರ್ಶಿ ಮೌಲಾನಾ ಶಫೀಕ್ ಅಹ್ಮದ್ ಖಾಸ್ಮಿ, ಸಮುದಾಯದ ಮುಖಂಡ ಜಾವೇದ್ ಜಾಗೀರ್ದಾರ್, ಶೇಖ್ ಹಮೀದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.