×
Ad

ಆಳಂದ | 100 ಕೋಟಿ ರೂ. ವೆಚ್ಚದಲ್ಲಿ ‘ಜ್ಞಾನನಗರಿ’ ನಿರ್ಮಾಣ : ಡಾ.ಮುರುಘರಾಜೇಂದ್ರ ಶ್ರೀ

"10 ಸಾವಿರ ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಮಹಾಸಂಕಲ್ಪ"

Update: 2026-07-09 20:30 IST

ಆಳಂದ : ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಿಡಗಾ ಮುಗಳಖೋಡ-ಕೊಟನೂರ ಶ್ರೀಮಠ ಘೋಷಿಸಿದೆ. ಬಡ ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಸಂಪೂರ್ಣ ಉಚಿತ, ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ 70 ಎಕರೆ ಪ್ರದೇಶದಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶಿಕ್ಷಣ ಸಂಕೀರ್ಣ ನಿರ್ಮಿಸಿ, 10 ಸಾವಿರ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡಲು ಶ್ರೀಮಠ ಸಂಕಲ್ಪ ಕೈಗೊಂಡಿದೆ.

ತಾಲೂಕಿನ ಜಿಡಗಾದ ನವಕಲ್ಯಾಣ ಮಠದ ಶಿವಯೋಗಿ ಜ್ಞಾನಮಂದಿರ ಉಚಿತ ವಸತಿ ಶಾಲೆಯಲ್ಲಿ ನಡೆದ ನೂತನ ಶೈಕ್ಷಣಿಕ ವರ್ಷದ ಆರಂಭೋತ್ಸವ, ಉಚಿತ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳ ಕಿಟ್ ವಿತರಣೆ ಮತ್ತು ಎಸೆಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಈ ಘೋಷಣೆ ಮಾಡಿದರು.

ಮೂರು ವರ್ಷಗಳ ಹಿಂದೆ ಸಾವಿರ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿಯೊಂದಿಗೆ ಆರಂಭವಾದ ಶಿಕ್ಷಣ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ವರ್ಷ ಸುಮಾರು 1,000 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಮುಂದಿನ ದಿನಗಳಲ್ಲಿ ಒಟ್ಟು 10 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಎಲ್ಲ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಯೋಜನೆಯಡಿ ಅತ್ಯಾಧುನಿಕ ಶಾಲಾ ಕಟ್ಟಡಗಳು, ಸುಸಜ್ಜಿತ ವಿದ್ಯಾರ್ಥಿ ವಸತಿ ನಿಲಯಗಳು, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾಂಗಣ ಹಾಗೂ ಸಾಂಸ್ಕೃತಿಕ ವೇದಿಕೆ ಸೇರಿದಂತೆ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಶ್ರೀಮಠದ ಸಂಪತ್ತು ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾಗಿದ್ದು, ಶಿಕ್ಷಣದ ಮೂಲಕ ಬಡ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುವುದೇ ನಮ್ಮ ಧ್ಯೇಯ ಎಂದು ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಕಲಿಕಾ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಎಸೆಸೆಲ್ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಶಿಕ್ಷಕರು, ಪಾಲಕರು, ಭಕ್ತರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಚಿನ್ಮಗಿರಿ ಮಠದ ಶ್ರೀ ವೀರಮಹಾಂತ ಶಿವಾಚಾರ್ಯರು, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಯೋಗಿರಾಜ ಶಾಸ್ತ್ರಿ ಖಾನಾಪೂರ, ಪ್ರಬುದ್ಧ ಆರ್.ಪಾಟೀಲ ಅವರು ಜಿಡಗಾ ಶ್ರೀಮಠದ ಕಾರ್ಯವನ್ನು ಶ್ಲಾಘೀಸಿ ಬಡಮಕ್ಕಳಿಗೆ ವರವಾಗಿದೆ ಎಂದರು.

ವೇದಿಕೆಯಲ್ಲಿ ಶಹಾಬಾದ್‌ ಮಠದ ಶ್ರೀ, ಚನ್ನವೀರಯ್ಯಾ ಸ್ವಾಮಿ, ಶಂಕರರಾವ್ ದೇಶಮುಖ, ಮಲ್ಲಪ್ಪ ಹತ್ತರಕಿ, ರೇವಣಸಿದ್ಧ ನಾಗೂರೆ, ಶಿವುಪುತ್ರಪ್ಪ ಪಾಟೀಲ, ಆನಂದ ಪಾಟೀಲ ಕೊರಳ್ಳಿ, ಶರಣು ಭೂಸನೂರ, ಅಣ್ಣಾರಾವ್ ಕಲವಗಾ, ರಾಜಶೇಖರ ಮಲಶೆಟ್ಟಿ, ವೀರಶೈವ ಮಹಾಸಭಾ ಅಧ್ಯಕ್ಷ ಶರಣಸಪ್ಪ ಪಾಟೀಲ, ಲಿಂಗರಾಜ ಪಾಟೀಲ, ಶ್ರೀಶೈಲ ಸುತಾರ ಮುನ್ನೊಳ್ಳಿ, ಡಾ.ಸಂಗಮೇಶ ಬಿರಾದಾರ, ಮುರಲೀಧರ ಎಕಲಾರಕರ್, ಬಸವೇಶ್ವರ ಕೃಷಿ ಕೇಂದ್ರದ ರಾಜಶೇಖರ ಪಾಟೀಲ, ಸಿದ್ಧರಾಮ ಯಾದವಾಡ, ಬಸಯ್ಯ ಹಿರೇಮಠ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಭಾಗವಹಿಸಿದ್ದರು. ಬಸವರಾಜ ಚೋಪಾಟೆ ನಿರೂಪಿಸಿದರು. ಆಸ್ತಾನ ಕಲಾಬಳಗದಿಂದ ಭಕ್ತಗಾಯನ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News