ಸಿಎಂ ಡಿ.ಕೆ.ಶಿವಕುಮಾರ್‌ನಿಂದ ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಣೆ
ಕಲಬುರಗಿ: ಪತ್ರಕರ್ತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ 2025-26ನೇ ಸಾಲಿನ ಯೋಜನೆಯಡಿ ಆಯ್ಕೆಯಾಗಿರುವ ಕಲಬುರಗಿ ಜಿಲ್ಲೆಯ ಆರು ಪತ್ರಕರ್ತರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಮೀಡಿಯಾ ಕಿಟ್ ವಿತರಿಸಿದರು.
ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಣಿ ಸಾಮ್ರಾಟ ಕನ್ನಡ ದಿನಪತ್ರಿಕೆಯ ವರದಿಗಾರ ಭರತ ಜಿ. ಖಮಿತ್ಕರ್, ಕರ್ನಾಟಕ ಸಂಧ್ಯಾಕಾಲ ಕನ್ನಡ ದಿನಪತ್ರಿಕೆಯ ಛಾಯಾಗ್ರಾಹಕ ಅಮ್ಜದ್ ಅಲಿ, ರಿಪಬ್ಲಿಕ್ ಕನ್ನಡ ಚಾನೆಲ್‌ನ ಕ್ಯಾಮರಾಮೆನ್ ವಿಜಯಕುಮಾರ್, ಸತ್ಯಕಾಮ ಕನ್ನಡ ದಿನಪತ್ರಿಕೆಯ ಸಂಪಾದಕ ಆನಂದ ಪಿ. ಮಣ್ಣೂರ, ಕ್ರಾಂತಿ ಕನ್ನಡ ದಿನಪತ್ರಿಕೆಯ ಸಂಪಾದಕ ಕಿರಣಕುಮಾರ್ ಸಿದ್ದರಾಮೇಶ್ವರ ಮುಧೋಳ ಹಾಗೂ ಕರ್ನಾಟಕ ಸಂಧ್ಯಾಕಾಲ ಕನ್ನಡ ದಿನಪತ್ರಿಕೆಯ ಹಿರಿಯ ವರದಿಗಾರ ಆಸ್ಮಾ ಬೇಗಂ ಅವರಿಗೆ ಮೀಡಿಯಾ ಕಿಟ್ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ, ಕಂದಾಯ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ, ಗೃಹ, ಐ.ಟಿ-ಬಿ.ಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಹಾಗೂ ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ಉಪಸ್ಥಿತರಿದ್ದರು.