×
Ad

ವಿವಿಧ ಇಲಾಖೆಗಳ 57 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ : ಸಿಎಂ ಡಿ.ಕೆ.ಶಿವಕುಮಾರ್

"ಗ್ರಾಮೀಣ ಅಭಿವೃದ್ಧಿಯೇ ಸರಕಾರದ ಮೊದಲ ಆದ್ಯತೆ"

Update: 2026-07-07 18:31 IST

ಕಲಬುರಗಿ: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಗ್ರಾಮೀಣ ಜನರ ಸಂಕಷ್ಟ ನಿವಾರಣೆಗೆ ಸರ್ಕಾರ ಸಮಗ್ರ ಕ್ರಮಗಳನ್ನು ಕೈಗೊಂಡಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.

ಕಲಬುರಗಿ ವಿಶ್ವವಿದ್ಯಾಲಯ ಆವರಣದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಶೇ.34ರಷ್ಟು ಮಳೆ ಕೊರತೆಯಾಗಿದ್ದು, 38 ತಾಲ್ಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ರೈತರಿಗೆ ಗೊಬ್ಬರ ಪೂರೈಕೆ, ಬಿತ್ತನೆಗೆ ಅಗತ್ಯ ಸಿದ್ಧತೆ, ಕುಡಿಯುವ ನೀರಿಗೆ ಮೊದಲ ಆದ್ಯತೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಹಾಗೂ ಪರಿಹಾರ ಕೇಂದ್ರಗಳ ಮೇಲ್ವಿಚಾರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗದ ಕಾರಣ ಕೆಲವು ಸಮಸ್ಯೆಗಳು ಎದುರಾಗಿದ್ದರೂ, ಜನರಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಗ್ರಾಮೀಣ ಅಭಿವೃದ್ಧಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸೇತು ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು, ಸರ್ಕಾರ ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡುತ್ತಿಲ್ಲ. ಬಿಎಲ್‌ಒಗಳು ಮನೆಮನೆಗೆ ತೆರಳಿ ಮಾಹಿತಿ ಪರಿಶೀಲಿಸಲಿದ್ದು, ವಾಸಸ್ಥಳ ಹಾಗೂ ಆದಾಯ ಪ್ರಮಾಣಪತ್ರಗಳನ್ನು ತ್ವರಿತವಾಗಿ ವಿತರಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಟಾಸ್ಕ್‌ಫೋರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಯೋಜನೆಗಳು, ವಾಟರ್ ಪ್ಲಾಂಟ್‌ಗಳ ನಿರ್ವಹಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ.

ಇ-ಖಾತೆ, ಇ-ಸ್ವತ್ತು ಸೇರಿದಂತೆ ಕಂದಾಯ ಇಲಾಖೆಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಸಿಎಸ್‌ಆರ್ ಸಹಭಾಗಿತ್ವದಲ್ಲಿ ಹೊಸ ಶಾಲೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ‘ಪ್ರಜಾ ಸೇವಾ ಅಭಿಯಾನ’ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪಿಎಂ ಮಿತ್ರ ಜವಳಿ ಪಾರ್ಕ್ ಸೇರಿದಂತೆ ಪ್ರಮುಖ ಯೋಜನೆಗಳಿಗೆ ವೇಗ ನೀಡಲಾಗುವುದು. ರೈತರಿಗೆ 344 ಕೋಟಿ ರೂ. ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಆದೇಶ ನೀಡಲಾಗಿದೆ. ವಿವಿಧ ಇಲಾಖೆಗಳಲ್ಲಿ 57 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ರೈತರ ಸಾಲಮನ್ನಾ ಹಾಗೂ ವಿಶೇಷ ಪ್ಯಾಕೇಜ್ ಕುರಿತೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಗೃಹ ಹಾಗೂ ಕಲಬುರಗಿ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಶರಣಪ್ರಕಾಶ್ ಪಾಟೀಲ್, ಡಾ. ಅಜಯ್ ಸಿಂಗ್, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಜಗದೇವ್ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News