ಬಸವಣ್ಣನವರ ಕಾಯಕ, ಸಮಾನತೆ, ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ಕಾಂಗ್ರೆಸ್ ಆಡಳಿತ: ಸಚಿವ ಪ್ರಿಯಾಂಕ್ ಖರ್ಗೆ
ಚಿತ್ತಾಪುರದಲ್ಲಿ ಬಸವ ಭವನ, ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ
ಚಿತ್ತಾಪುರ: ಜಗಜ್ಯೋತಿ ಬಸವಣ್ಣನವರ ಕಾಯಕ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವಾದರ್ಶಗಳ ಆಧಾರದ ಮೇಲೆಯೇ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಹೊರವಲಯದ ರಾವೂರ ರಸ್ತೆಯಲ್ಲಿ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸಾರಿದ ‘ಕಾಯಕವೇ ಕೈಲಾಸ’ ಎಂಬ ತತ್ವದಂತೆ ಕಾಂಗ್ರೆಸ್ ಸರ್ಕಾರ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿ, ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ನಾನು ಬಸವಣ್ಣನವರ ಅನುಯಾಯಿಯಾಗಿದ್ದು, ಅವರು ಸಾರಿದ ‘ಕಾಯಕವೇ ಕೈಲಾಸ’ ಎಂಬ ವಚನದ ಆಶಯದಂತೆ ಕೆಲಸ ಮಾಡುತ್ತಿದ್ದೇನೆ. ಮಹನೀಯರ ಜಯಂತಿಗಳಿಗೆ ಸರ್ಕಾರಿ ರಜೆ ನೀಡುವ ಬದಲು ಶಾಲೆಗಳಲ್ಲಿ ಜಯಂತಿ ಆಚರಿಸಿ, ಅವರ ಜೀವನ, ತತ್ವಾದರ್ಶ ಹಾಗೂ ವಚನಗಳ ಕುರಿತು ಮಕ್ಕಳಿಗೆ ತಿಳಿಸಬೇಕು ಎಂಬುದು ನನ್ನ ಆಶಯ. ಇದರಿಂದ ಮುಂದಿನ ಪೀಳಿಗೆಗೆ ಮಹನೀಯರ ವಿಚಾರಧಾರೆಗಳು ತಲುಪುತ್ತವೆ ಎಂದು ಹೇಳಿದರು.
ಕಾಯಕವೇ ಕೈಲಾಸ ಎನ್ನುವುದನ್ನು ಕೇವಲ ಹೇಳುವುದಲ್ಲ, ಅದನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಜನರು ನನ್ನನ್ನು ಆಯ್ಕೆ ಮಾಡಿ ಸಚಿವ ಸ್ಥಾನ ನೀಡಿರುವುದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ಹೊರತು, ಪ್ರತಿಯೊಂದು ಜಯಂತಿ, ಕುಂಭಸ್ನಾನ, ನಾಮಕರಣ ಹಾಗೂ ಮದುವೆ ಕಾರ್ಯಕ್ರಮಗಳಿಗೆ ಹಾಜರಾಗುವುದಕ್ಕಲ್ಲ. ಕಳೆದ ಹತ್ತರಿಂದ ಹನ್ನೆರಡು ವರ್ಷಗಳ ಹಿಂದೆ ಚಿತ್ತಾಪುರ ಹೇಗಿತ್ತು, ಈಗ ಹೇಗೆ ಬದಲಾಗಿದೆ ಎಂಬುದನ್ನು ಜನರು ಗಮನಿಸಬೇಕು. ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಕ್ಷೇತ್ರ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಹೇಳುವುದಿಲ್ಲ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕಿಂತ ಜನರಿಗಾಗಿ ಕೆಲಸ ಮಾಡುವುದೇ ನನ್ನ ಆದ್ಯತೆಯಾಗಿದೆ ಎಂದರು.
ಚಿತ್ತಾಪುರದಲ್ಲಿ ಬಸವ ಭವನ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂಟಪಗಳು ಹಾಗೂ ವಸತಿ ನಿಲಯಗಳನ್ನು ನಿರ್ಮಿಸೋಣ. ಕಲಬುರಗಿಯಲ್ಲಿ ಸುಮಾರು 50ರಿಂದ 60 ಕೋಟಿ ರೂ. ವೆಚ್ಚದಲ್ಲಿ ಆರು ಎಕರೆ ಜಾಗದಲ್ಲಿ ಬೃಹತ್ ಬಸವ ವಚನ ಮಂಟಪ ನಿರ್ಮಿಸಲಾಗುತ್ತಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬಸವಣ್ಣನವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಏಕತೆ ಮತ್ತು ಸಮಾನತೆ ಸ್ಥಾಪಿಸಲು ಅವರು ಮಹಾನ್ ಕ್ರಾಂತಿಯನ್ನೇ ಮಾಡಿದ್ದರು. ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾನತೆಯಿಂದ ಬದುಕುವ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಚೇತನ ಬಸವಣ್ಣನವರು ಎಂದು ಹೇಳಿದರು.
ಚಿತ್ತಾಪುರದಲ್ಲಿ ಬಸವ ಭವನ ಹಾಗೂ ಬಾಲಕಿಯರ ವಸತಿ ನಿಲಯ ನಿರ್ಮಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಬಾಲಕರ ವಸತಿ ನಿಲಯ ನಿರ್ಮಾಣಕ್ಕೂ ಶ್ರಮಿಸಬೇಕು. ಅದಕ್ಕೆ ನನ್ನಿಂದ ಅಗತ್ಯ ಸಹಾಯ ಮತ್ತು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಚಿತ್ತಾಪುರ-ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ದಿಗ್ಗಾಂವದ ಶ್ರೀ ಸಿದ್ಧವೀರ ಶಿವಾಚಾರ್ಯರು, ಹಲಕರ್ಟಿಯ ಶ್ರೀ ರಾಜಶೇಖರ ಶಿವಾಚಾರ್ಯರು, ಬೆಳಗುಂಪಾದ ಶ್ರೀ ಪರಮೇಶ್ವರ ಶಿವಾಚಾರ್ಯರು, ರಾವೂರಿನ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಮುಗುಳನಾಗಾಂವದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಅಳ್ಕೊಳ್ಳಿಯ ಶ್ರೀ ಸಂಗಮನಾಥ ದೇವರು, ಮಾಲಗತ್ತಿಯ ಶ್ರೀ ಚನ್ನಬಸವ ಶರಣರು ಹಾಗೂ ಕಂಚಗಾರಹಳ್ಳದ ಶ್ರೀ ಮಲ್ಲಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು.
ಶಾಸಕ ಎಂ.ವೈ. ಪಾಟೀಲ, ಶರಣು ಮೋದಿ, ಸೈಯದ್ ಮಹೇಮೂದ್ ಸಾಹೇಬ್, ಶಿವಾನಂದ ಪಾಟೀಲ ಮರತೂರ, ಪ್ರವೀಣ ಪಾಟೀಲ ಹರವಾಳ, ಚಂದ್ರಶೇಖರ ಸಾತನೂರ, ಅಣ್ಣಾರಾವ ಪಾಟೀಲ ಮುಡಬೂಳ, ಡಾ. ಪ್ರಭುರಾಜ ಕಾಂತಾ, ಪ್ರಭುದೇವ ಬೊಮ್ಮನಳ್ಳಿ, ಶರಣು ಸಜ್ಜನಶೆಟ್ಟಿ, ಅನಿಲ ವಡ್ಡಡಗಿ, ಚಂದ್ರಕಾಂತ ಪಾಟೀಲ, ಅಶೋಕ ನಿಪ್ಪಾಣಿ, ಶಾಂತಕುಮಾರ ಹತ್ತಿ, ಶಿವರೆಡ್ಡಿಗೌಡ ಪಾಲಪ, ಶರಣಗೌಡ ಪಾಟೀಲ, ಬಸವರಾಜ ಪಾಟೀಲ ಹೇರೂರ, ಬಸವರಾಜ ಶಿವಗೋಳ, ಭಾಗಣ್ಣಗೌಡ ಸಂಕನೂರ, ಭೀಮಣ್ಣ ಸಾಲಿ, ಸಿದ್ದುಗೌಡ ಅಫಜಲಪುರಕರ್, ವೀರಭದ್ರಪ್ಪ ಗಡ್ಡದ, ಪ್ರಕಾಶ ಹಂಚನಾಳ, ಮಲರೆಡ್ಡಿ ಗೋಪಸೇನ, ಮಲ್ಲಣ್ಣ ಬೊಮ್ಮನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭೂಮಿದಾನಿಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ ಭಂಕಲಗಿ ಸ್ವಾಗತಿಸಿದರು. ವಿಶ್ವರಾಧ್ಯ ಪಾಟೀಲ ಕರದಾಳ ನಿರೂಪಿಸಿದರು. ವೀರೇಶ ಮಕಾಪ ವಂದಿಸಿದರು.
ಜಯಂತಿಗಳು ಡಿಜೆ ಹಾಡುಗಳಿಗೆ ಸೀಮಿತವಾಗಬಾರದು :
ಬಸವಣ್ಣನವರ ಜಯಂತಿ ಸೇರಿದಂತೆ ಇತರ ಮಹನೀಯರ ಜಯಂತಿಗಳಂದು ಅವರ ತತ್ವಾದರ್ಶಗಳನ್ನು ಪಾಲಿಸುವ ಹಾಗೂ ವಿಚಾರಗಳನ್ನು ತಿಳಿದುಕೊಳ್ಳುವ ಕೆಲಸವಾಗುತ್ತಿಲ್ಲ. ಬದಲಾಗಿ ಪುಣೆ, ಸೊಲ್ಲಾಪುರದಿಂದ ಡಿಜೆ ತರಿಸಿ ಹಾಡುಗಳಿಗೆ ಕುಣಿಯುವುದರಲ್ಲೇ ಜಯಂತಿಗಳು ಸೀಮಿತವಾಗುತ್ತಿರುವುದು ದುರಂತದ ಸಂಗತಿ. ಮಹನೀಯರ ಜಯಂತಿಗಳಂದು ಡಿಜೆ ಹಾಡುಗಳಿಗೆ ಕುಣಿಯುವುದಕ್ಕಿಂತ ಅವರ ಜೀವನ, ವಚನಗಳು ಹಾಗೂ ತತ್ವಾದರ್ಶಗಳನ್ನು ಓದಿ ಅರ್ಥಮಾಡಿಕೊಳ್ಳುವ ಕೆಲಸವಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.