Kalaburagi | ಎರಡು ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ: ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ: ನಗರದ ಎಸ್.ಎಂ.ಕೃಷ್ಣ ಕಾಲೋನಿಯಲ್ಲಿ ಬಹುದಿನಗಳಿಂದ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳ ಕೊರತೆಯನ್ನು ಪರಿಹರಿಸುವಂತೆ ಕಾಲೋನಿಯ ನಾಗರಿಕರ ನಿಯೋಗವು ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಮನವಿ ಸಲ್ಲಿಸಿತು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಅಲ್ಲಮಪ್ರಭು ಪಾಟೀಲ್ ಅವರನ್ನು ಭೇಟಿ ಮಾಡಿದ ನಾಗರಿಕರು, ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ನಿವಾಸಿಗಳು ಎದುರಿಸುತ್ತಿರುವ ತೊಂದರೆಗಳನ್ನು ವಿವರಿಸಿದರು.
ನಾಗರಿಕರ ಮನವಿಗೆ ಸ್ಪಂದಿಸಿದ ಶಾಸಕರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಯ ಕುರಿತು ಚರ್ಚಿಸಿದರು. ಇನ್ನೆರಡು ದಿನಗಳೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ನೀರು ಸರಬರಾಜು ಪೈಪ್‌ಲೈನ್ ಸ್ವಚ್ಛಗೊಳಿಸುವುದರ ಜೊತೆಗೆ ನೀರು ಸಂಗ್ರಹಣಾ ತೊಟ್ಟಿ (ಗುಮ್ಮಿ) ನಿರ್ಮಿಸುವುದಾಗಿಯೂ ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಹಡಪದ, ವಿಜಯಲಕ್ಷ್ಮಿ ಗುತ್ತೇದಾರ್, ಸಲಾವುದ್ದೀನ್ ಪಟೇಲ್, ಗುಲಾಮ್ ರಷೂಲ್, ಗೌಡಪ್ಪ ಸೇರಿದಂತೆ ಕಾಲೋನಿಯ ನಾಗರಿಕರು ಉಪಸ್ಥಿತರಿದ್ದರು.