ಕಲ್ಯಾಣ ಪಾವತಿಗಳಿಗೆ ಬಯೋಮೆಟ್ರಿಕ್, ಮತದಾರರ ಗುರುತಿನ ಚೀಟಿ ಕಡ್ಡಾಯ: ಸಿಪಿಎಂ ಖಂಡನೆ
ಬಡವರಿಗೆ ಸೌಲಭ್ಯ ನಿರಾಕರಿಸುವ ವ್ಯವಸ್ಥಿತ ತಂತ್ರ: ಕೆ.ನೀಲಾ ಆರೋಪ
ಕೆ.ನೀಲಾ
ಕಲಬುರಗಿ, ನ.5: ಕಲ್ಯಾಣ ಯೋಜನೆಗಳ ಪಾವತಿಗಳಿಗೆ ಬಯೋಮೆಟ್ರಿಕ್ ಮತ್ತು ಮತದಾರರ ಗುರುತಿನ ಚೀಟಿ (EPIC) ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕ್ರಮ ಗ್ರಾಮೀಣ ಬಡವರಿಗೆ ಕಲ್ಯಾಣ ಸೌಲಭ್ಯಗಳನ್ನು ನಿರಾಕರಿಸುವ ಯೋಜಿತ ತಂತ್ರವಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಕಲ್ಯಾಣ ಯೋಜನೆಗಳ ಪಾವತಿಗಳಿಗೆ ಆಧಾರ್ ಬದಲಾಗಿ ಬಯೋಮೆಟ್ರಿಕ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಆಧರಿಸಲಾಗುವುದು ಎಂಬ ಕೇಂದ್ರ ಸರಕಾರದ ಆದೇಶ ಗ್ರಾಮೀಣ ಬಡವರ ಮೇಲಿನ ಮತ್ತೊಂದು ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಉದ್ಯೋಗ ಯೋಜನೆಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದಿಂದ ಕಾರ್ಮಿಕರಿಗೆ ಸೌಲಭ್ಯ ನಿರಾಕರಿಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ವೃದ್ಧ ಮಹಿಳಾ ಕಾರ್ಮಿಕರ ಕಣ್ಣಿನ ಗುರುತುಗಳನ್ನು ಯಂತ್ರಗಳು ಪತ್ತೆಹಚ್ಚದಿರುವುದು, ದೈಹಿಕ ಶ್ರಮದಿಂದ ಬೆರಳಚ್ಚು ಸವೆದಿರುವುದು ಮತ್ತು ಇ-ಕೆವೈಸಿಗೆ ಅಗತ್ಯವಿರುವ ಸ್ಮಾರ್ಟ್ಫೋನ್ಗಳ ಕೊರತೆಯಿಂದ ಅನೇಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಧಾರ್ ಕಡ್ಡಾಯವಲ್ಲ ಎಂದು ಹಿಂದೆ ಸುಪ್ರೀಂ ಕೋರ್ಟ್ಗೆ ಭರವಸೆ ನೀಡಿದ್ದ ಸರ್ಕಾರ, ನಂತರ ಕಲ್ಯಾಣ ಯೋಜನೆಗಳಲ್ಲಿ ಅದನ್ನು ಕಡ್ಡಾಯಗೊಳಿಸಿದೆ. ಈಗ ಆಧಾರ್ ವ್ಯವಸ್ಥೆಯನ್ನೇ ಬದಿಗಿಟ್ಟು ಮತ್ತೊಂದು ಗುರುತಿನ ದಾಖಲೆಯನ್ನು ಕಡ್ಡಾಯಗೊಳಿಸುತ್ತಿರುವುದು ಸರಕಾರದ ನಿಲುವಿನ ವೈರುಧ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯೊಂದಿಗೆ ಈ ಕ್ರಮವನ್ನು ನೋಡಬೇಕಿದೆ. ಎಸ್ಐಆರ್ ಮೂಲಕ ಅಂಚಿನಲ್ಲಿರುವ ಸಮುದಾಯಗಳು, ಮುಸ್ಲಿಮರು, ಮಹಿಳೆಯರು ಮತ್ತು ಆರ್ಥಿಕವಾಗಿ ದುರ್ಬಲರು ಸೇರಿದಂತೆ 13.4 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ಅಂದಾಜಿದೆ. ಇದು ಮತದಾನದ ಹಕ್ಕನ್ನು ಸಾಮೂಹಿಕವಾಗಿ ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ನೆಪದಲ್ಲಿ ಕೆಲವು ರಾಜ್ಯಗಳಲ್ಲಿ ಪಡಿತರ ಮತ್ತು ಇತರ ಕಲ್ಯಾಣ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ಮತದಾರರ ಪಟ್ಟಿಯಿಂದ ಹೊರಗಿರುವುದರಿಂದ ಸಾಮಾಜಿಕ ಕಲ್ಯಾಣ ಹಕ್ಕುಗಳು ರದ್ದಾಗುವುದಿಲ್ಲ ಎಂಬ ಸುಪ್ರೀಂ ಕೋರ್ಟ್ ನ ತೀರ್ಪಿಗೆ ಇದು ವಿರುದ್ಧವಾಗಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಪಾವತಿಗಳಿಗೆ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಗ್ರಾಮೀಣ ಬಡವರಿಗೆ ಲಭ್ಯವಿಲ್ಲದ ತಂತ್ರಜ್ಞಾನ ಅಥವಾ ದಾಖಲೆಗಳ ಷರತ್ತು ವಿಧಿಸದೆ, ಅರ್ಹರಿಗೆ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಸಾರ್ವತ್ರಿಕವಾಗಿ ತಲುಪಿಸಬೇಕು ಎಂದು ಕೆ. ನೀಲಾ ಆಗ್ರಹಿಸಿದ್ದಾರೆ.