ಶಹಾಬಾದ್: ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ ಸುಮಾರು 10ರಿಂದ 12 ಲಕ್ಷ ರೂ. ಮೌಲ್ಯದ ವಿದ್ಯುತ್ ಕೇಬಲ್‌ಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ರೈತರು ಶಹಾಬಾದ್ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಗ್ರಾಮದ ಸುಮಾರು 30ರಿಂದ 35 ರೈತರ ಪಂಪ್‌ಸೆಟ್‌ಗಳ ಕೇಬಲ್‌ಗಳನ್ನು ಕತ್ತರಿಸಿ ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಪ್ರತಿ ಅಡಿ ಕೇಬಲ್‌ಗೆ 70ರಿಂದ 80 ರೂ. ಬೆಲೆಯಿದ್ದು, ರೈತರು ತಮ್ಮ ಪಂಪ್‌ಸೆಟ್‌ಗಳಿಗೆ ತಲಾ 200ರಿಂದ 600 ಅಡಿವರೆಗೆ ಕೇಬಲ್ ಅಳವಡಿಸಿದ್ದರು. ಕಳ್ಳತನಕ್ಕೆ ಬಳಸಿದ ಕಟ್ಟರ್ ಹಾಗೂ ಪಕ್ಕಡಗಳನ್ನು ಕಳ್ಳರು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ ಎಂದು ರೈತರು ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ಕಳ್ಳತನ ನಡೆದಿದ್ದು, ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಬೇಕು. ಕಳುವಾದ ಕೇಬಲ್‌ಗಳನ್ನು ಮರಳಿ ಕೊಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ದೂರು ಸ್ವೀಕರಿಸಿ ಮಾತನಾಡಿದ ಶಹಾಬಾದ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ಎಸ್. ವನಂಜಕರ, ತನಿಖಾ ತಂಡವನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಲಾಗುವುದು. ರೈತರು ತಾಳ್ಮೆಯಿಂದ ಇರಬೇಕು. ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಿವಕುಮಾರ ನಾಟೀಕಾರ, ವಿಜಯಕುಮಾರ, ಮಲ್ಲಣ್ಣ ನರಿಬೋಳ, ದಸ್ತಗಿರ ಪಟೇಲ, ಸಿದ್ದಣ್ಣ ರಸ್ತಾಪೂರ, ವಿಜಯಕುಮಾರ ಮುತ್ತಗಿ, ಮಂಜುನಾಥ ವಾಲಿಕಾರ ಸೇರಿದಂತೆ ಗ್ರಾಮದ ಅನೇಕ ರೈತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor