×
Ad

ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಯಾವುದೇ ಪ್ರಸ್ತಾವ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಕೆಪಿಸಿಸಿ ಅಧ್ಯಕ್ಷರ ಆಯ್ಕೆ, ಸಚಿವ ಸಂಪುಟ ವಿಸ್ತರಣೆ ಕುರಿತು ಜೂನ್ 3ರ ಬಳಿಕ ಸ್ಪಷ್ಟತೆ

Update: 2026-05-31 11:41 IST

ಕಲಬುರಗಿ: ರಾಜ್ಯದಲ್ಲಿ ಹೊಸ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಸೃಷ್ಟಿಸುವ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಸ್ತಾವ ತಮ್ಮ ಮುಂದೆ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ, ಡಿಸಿಎಂ ಹುದ್ದೆ ಸೃಷ್ಟಿ ಹಾಗೂ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದರು.

"ಡಿಸಿಎಂ ಹುದ್ದೆ ಕುರಿತು ಯಾವುದೇ ಪ್ರಸ್ತಾವ ಇನ್ನೂ ಬಂದಿಲ್ಲ. ಪ್ರಸ್ತಾವ ಬಂದ ಬಳಿಕ ಎಷ್ಟು ಡಿಸಿಎಂಗಳನ್ನು ನೇಮಿಸಬೇಕು, ಎಷ್ಟು ಸಚಿವರನ್ನು ಸಂಪುಟಕ್ಕೆ ಸೇರಿಸಬೇಕು ಎಂಬುದರ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಖರ್ಗೆ ಹೇಳಿದರು.

ಸಚಿವ ಸಂಪುಟ ವಿಸ್ತರಣೆಯ ಜೊತೆಗೆ ಪ್ರಮುಖ ನಿಗಮ-ಮಂಡಳಿಗಳು ಹಾಗೂ ಪಕ್ಷದ ಪ್ರಮುಖ ಹುದ್ದೆಗಳ ನೇಮಕವನ್ನೂ ಕೈಗೊಳ್ಳಬೇಕೇ ಎಂಬ ವಿಚಾರವೂ ಚರ್ಚೆಯಲ್ಲಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಜೂನ್ 3ರ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅವರು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಖರ್ಗೆ, ಮೊದಲ ಹಂತದಲ್ಲಿ ಎಷ್ಟು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಪ್ರಸ್ತಾವಯೂ ಇನ್ನೂ ಅಂತಿಮಗೊಂಡಿಲ್ಲ ಎಂದರು.

"ಎಂಟು ಸಚಿವರನ್ನು ಮಾಡುತ್ತಾರೋ, ಹತ್ತು ಸಚಿವರನ್ನು ಮಾಡುತ್ತಾರೋ ಎಂಬ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಮೊದಲ ಹಂತದಲ್ಲಿ ಕೆಲವರನ್ನು ಸಚಿವರನ್ನಾಗಿ ನೇಮಿಸಿ, ಬಳಿಕ 15 ದಿನಗಳು ಅಥವಾ ಒಂದು ತಿಂಗಳ ಅಂತರದಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಅಂತಿಮವಾಗಿ ನೂತನ ಮುಖ್ಯಮಂತ್ರಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಅವರ ವಿವೇಚನೆಗೆ ಬಿಟ್ಟ ವಿಚಾರ" ಎಂದು ಖರ್ಗೆ ತಿಳಿಸಿದರು.

ಇದೇ ವೇಳೆ ನೂತನ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಸಂಘಟನೆಗೆ ಬಲ ತುಂಬಬಲ್ಲ ನಾಯಕತ್ವದ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು.

"ಒಬ್ಬ ಅಧ್ಯಕ್ಷರು ಸ್ಥಾನ ತೊರೆದ ಬಳಿಕ ಮತ್ತೊಬ್ಬರು ಬರಲೇಬೇಕು. ಉತ್ತಮ ವ್ಯಕ್ತಿತ್ವ, ಸಾಮಾಜಿಕ ಮತ್ತು ರಾಜಕೀಯ ಸಮತೋಲನ, ಪಕ್ಷ ಸಂಘಟನೆಯ ಅಗತ್ಯತೆ ಹಾಗೂ ಮುಂಬರುವ ಚುನಾವಣೆಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ" ಎಂದರು.

ಮುಂದಿನ ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಬಾಕಿ ಇರುವುದರಿಂದ ಪಕ್ಷ ವೇಗವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

"ವೇಗವಾಗಿ ಕೆಲಸ ಮಾಡುವ, ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುವ ನಾಯಕನನ್ನು ನಾವು ಹುಡುಕುತ್ತಿದ್ದೇವೆ. ಜೊತೆಗೆ ಅವರಿಗೆ ಸಹಕಾರ ನೀಡುವ ಬಲಿಷ್ಠ ತಂಡವೂ ಇರಬೇಕು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ನೂತನ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು" ಎಂದು ಖರ್ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News