Kalaburagi | ಕೃಷಿ ಮಳಿಗೆಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳಿಂದ ಅನಿರೀಕ್ಷಿತ ದಾಳಿ
ನಿಯಮ ಉಲ್ಲಂಘಿಸಿದ ಮಾರಾಟಗಾರರಿಗೆ ನೋಟಿಸ್ ಜಾರಿ
ಕಲಬುರಗಿ: ರೈತರಿಗೆ ರಸಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅನಾವಶ್ಯಕವಾಗಿ ಹಣ ವಸೂಲಿ ಮಾಡುವ ಮಾರಾಟಗಾರರ ವಿರುದ್ಧ ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ಅವಶ್ಯಕ ವಸ್ತುಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಅವರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಜೇವರ್ಗಿ, ಯಡ್ರಾಮಿ, ಚಿತ್ತಾಪುರ ಹಾಗೂ ಸೇಡಂ ತಾಲ್ಲೂಕುಗಳ ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ಕೈಗೊಂಡಿತು. ಈ ವೇಳೆ ಐ-ಎಫ್‌ಎಂಎಸ್ (iFMS) ತಂತ್ರಾಂಶದಲ್ಲಿ ರಸಗೊಬ್ಬರ ವಿತರಣೆ, ದಾಸ್ತಾನು ವಿವರಗಳು ಹಾಗೂ ಪಿಒಎಸ್ (POS) ಯಂತ್ರಗಳ ದಾಖಲೆಗಳನ್ನು ಪರಿಶೀಲಿಸಲಾಯಿತು.
ರೈತರಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಉದ್ದೇಶದಿಂದ ಈ ವಿಶೇಷ ತಪಾಸಣೆ ನಡೆಸಲಾಗಿದೆ ಎಂದು ಸಮದ್ ಪಟೇಲ್ ತಿಳಿಸಿದ್ದಾರೆ.
ಮಾರಾಟಗಾರರ ಗೋದಾಮುಗಳಿಗೂ ಭೇಟಿ ನೀಡಿದ ಅಧಿಕಾರಿಗಳು ರಸಗೊಬ್ಬರ (ನಿಯಂತ್ರಣ) ಆದೇಶ-1985ರ ನಿಯಮಗಳನ್ನು ಉಲ್ಲಂಘಿಸಿರುವ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿದರು. ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಿಸಿದ ಮಾರಾಟ ಪರವಾನಗಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೃಷಿ ಪರಿಕರ ಮಾರಾಟಗಾರರ ವಿರುದ್ಧ ಕೈಗೊಂಡ ಕ್ರಮಗಳ ಮಾಹಿತಿಯನ್ನು ಪರಿಶೀಲಿಸಲಾಯಿತು.
ಜೇವರ್ಗಿ, ಯಡ್ರಾಮಿ, ಸೇಡಂ ಹಾಗೂ ಚಿತ್ತಾಪುರ ತಾಲ್ಲೂಕುಗಳಲ್ಲಿ ಒಟ್ಟು 28 ಕೃಷಿ ಮಳಿಗೆಗಳನ್ನು ತಪಾಸಣೆ ಮಾಡಲಾಗಿದ್ದು, 26 ಮಳಿಗೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. 10 ಮಳಿಗೆಗಳಿಗೆ ಮಾರಾಟ ತಡೆ ಆದೇಶ ನೀಡಲಾಗಿದೆ. ಜೇವರ್ಗಿ ತಾಲ್ಲೂಕಿನಲ್ಲಿ ಮಾತ್ರ 192.4 ಟನ್ ರಸಗೊಬ್ಬರ ದಾಸ್ತಾನು ತಡೆಹಿಡಿಯಲಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು ರೂ.45.75 ಲಕ್ಷಗಳಾಗಿದೆ.
ಈ ಅನಿರೀಕ್ಷಿತ ದಾಳಿ ವೇಳೆ ಕಲಬುರಗಿ ಉಪ ಕೃಷಿ ನಿರ್ದೇಶಕರಾದ ಡಾ. ಬಾಲರಾಜ್ ಗಂಗರಾವ್, ಸೇಡಂ ಉಪ ಕೃಷಿ ನಿರ್ದೇಶಕರಾದ ಅನಸೂಯಾ ಹೂಗಾರ, ಜಾರಿದಳದ ಸಹಾಯಕ ಕೃಷಿ ನಿರ್ದೇಶಕರು, ಸಂಬಂಧಿತ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.