ಸಿಯುಕೆಯಲ್ಲಿ ಅಕ್ಟೋಬರ್ 26ರಿಂದ 30ರವರೆಗೆ ಅಂತರರಾಷ್ಟ್ರೀಯ ಸಮ್ಮೇಳನ; ಪೋಸ್ಟರ್, ವೆಬ್‌ಸೈಟ್ ಅನಾವರಣ
ಕಲಬುರಗಿ: ಭೂಮಿಯ ಹವಾಮಾನ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಮಾನವನ ಪ್ರಭಾವ, ಹವಾಮಾನ ಬದಲಾವಣೆ, ನೈಸರ್ಗಿಕ ಪರಿಸರದ ಅವನತಿ ಹಾಗೂ ವಿಪತ್ತು ನಿರ್ವಹಣೆ ಸೇರಿದಂತೆ ಜಾಗತಿಕ ಪರಿಸರ ಸವಾಲುಗಳ ಕುರಿತು ಚರ್ಚಿಸಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಐದು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಸಿಯುಕೆಯ ಭೂವಿಜ್ಞಾನ ನಿಕಾಯದ ಭೂಗೋಳಶಾಸ್ತ್ರ ವಿಭಾಗದ ವತಿಯಿಂದ, ಮೆಕ್ಸಿಕೋ ನಗರದ ಅಂತರಶಿಸ್ತೀಯ ಅಧ್ಯಯನ ಕೇಂದ್ರ (AIICDA), ರಾಷ್ಟ್ರೀಯ ಪಾಲಿಟೆಕ್ನಿಕ್ ಸಂಸ್ಥೆ (IPN) ಹಾಗೂ ಪ್ರಾದೇಶಿಕ ಮತ್ತು ಪರಿಸರ ಸಾಮಾಜಿಕ-ನಗರ ಸಮಸ್ಯೆಗಳ ಕುರಿತಾದ ಅಂತರರಾಷ್ಟ್ರೀಯ ಸಂಶೋಧಕರ ಜಾಲ (INRUS) ಸಹಯೋಗದಲ್ಲಿ ‘ಭೂಮಿಯ ಹವಾಮಾನ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಮಾನವನ ಪ್ರಭಾವ’ ವಿಷಯದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ (ICEEA-2026) ಅನ್ನು 2026ರ ಅಕ್ಟೋಬರ್ 26ರಿಂದ 30ರವರೆಗೆ ಸಿಯುಕೆ ಆವರಣದಲ್ಲಿ ಆಯೋಜಿಸಲಾಗುತ್ತಿದೆ.
ಈ ಸಂಬಂಧ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹಾಗೂ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಅವರು ಗುರುವಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿ, ಅಧಿಕೃತ ವೆಬ್‌ಸೈಟ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಭಾರತೀಯ ಸಂಚಾಲಕರು ಹಾಗೂ ಭೂವಿಜ್ಞಾನ ನಿಕಾಯದ ಡೀನ್ ಪ್ರೊ. ಎಂ. ಪ್ರಶಾಂತ್, ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಾಬು ನಲ್ಲುಸಾಮಿ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಸಿಯುಕೆ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ತೇಜಸ್ವಿ ಲಕ್ಕುಂಡಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ವಿದೇಶಿ ಪ್ರತಿನಿಧಿಗಳಿಗೆ (ಶಿಕ್ಷಕರು, ಸಂಶೋಧಕರು, ವಿಜ್ಞಾನಿಗಳು, ಪ್ರಾಧ್ಯಾಪಕರು) 350 ಅಮೆರಿಕನ್ ಡಾಲರ್, ವಿದೇಶಿ ವಿದ್ಯಾರ್ಥಿಗಳಿಗೆ 150 ಅಮೆರಿಕನ್ ಡಾಲರ್, ಭಾರತೀಯ ಪ್ರತಿನಿಧಿಗಳಿಗೆ ₹3,500, ಸಂಶೋಧನಾ ವಿದ್ಯಾರ್ಥಿಗಳಿಗೆ ₹1,500, ಭಾರತೀಯ ವಿದ್ಯಾರ್ಥಿ ಪ್ರತಿನಿಧಿಗಳಿಗೆ ₹750 ಹಾಗೂ ಅತಿಥಿ ಪ್ರತಿನಿಧಿಗಳಿಗೆ ₹1,500 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಿಯುಕೆಯ ಭೂವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಭಾರತೀಯ ಸಂಚಾಲಕ ಡಾ. ಬಾಬು ನಲ್ಲುಸಾಮಿ ಅವರನ್ನು ಸಂಪರ್ಕಿಸಬಹುದು.