Kalaburagi | ವಸತಿ ಶಾಲೆ ವಿದ್ಯಾರ್ಥಿಗಳ ಅಸ್ವಸ್ಥತೆ ಪ್ರಕರಣ: ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

Update: 2026-07-30 14:41 IST

ಅಫಜಲಪುರ: ತಾಲೂಕಿನ ಕರಜಗಿ ಮೊರಾರ್ಜಿ ವಸತಿ ಶಾಲೆಯಲ್ಲಿ ಆಹಾರ ಸೇವಿಸಿದ ಬಳಿಕ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಸೇರಿ ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ಕಲಬುರಗಿ–ವಿಜಯಪುರ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ವಸತಿ ನಿಲಯದ ವಾರ್ಡನ್, ಪ್ರಾಂಶುಪಾಲರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಿಂದ ಕಲಬುರಗಿ–ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಸ್ಥಳಕ್ಕೆ ಭೇಟಿ; ಯೋಗಕ್ಷೇಮ ವಿಚಾರಣೆ 

ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಭೇಟಿ ನೀಡಿ, ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಅವರು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರು. ವೈದ್ಯರು ಹಾಗೂ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದು, ಅಗತ್ಯ ಚಿಕಿತ್ಸೆಯನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಒದಗಿಸುವಂತೆ ಸೂಚಿಸಿದರು. ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಜಂಟಿ ನಿರ್ದೇಶಕಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News