ಜೇವರ್ಗಿ| ಕಳಪೆ ನೀರಾವರಿ ಕಾಮಗಾರಿ ಆರೋಪ: ರೈತ ಸಂಘದಿಂದ ರಸ್ತೆ ತಡೆದು ಪ್ರತಿಭಟನೆ
ಜೇವರ್ಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ರೈತರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಹಾಂತಗೌಡ ನಂದಿಹಳ್ಳಿ, ಮಲ್ಲಾಬಾದ್ ಏತ ನೀರಾವರಿ ಯೋಜನೆಗಾಗಿ ಅನೇಕ ರೈತರು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಆದರೆ ಈಗ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿರುವುದು ರೈತರಿಗೆ ನಿರಾಸೆ ತಂದಿದೆ ಎಂದರು.
ರೈತರ ಹೊಲಗಳ ಮೂಲಕ ಹಾದು ಹೋಗಿರುವ ಕಾಲುವೆ ಕಾಮಗಾರಿಗಳಿಗೆ ಸಂಬಂಧಿಸಿದ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ನಂದಿಹಳ್ಳಿ ಭಾಗದ ಕಾಲುವೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ತಹಶೀಲ್ದಾರ್, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ರೈತರ ಮನವಿ ಆಲಿಸಿದರು.
ಈ ಸಂದರ್ಭದಲ್ಲಿ ಮಲ್ಲಣ್ಣಗೌಡ ಪಾಟೀಲ್, ದೇವಮ್ಮ ಯಾಳವಾರ, ಅಲ್ಲಾಪಟೇಲ್ ಇಜೇರಿ, ಲಾಳೇಸಾಬ್ ಮನಿಯಾರ್, ಸಿದ್ದು ಯಂಕಂಚಿ, ಸಿದ್ದಣ್ಣಗೌಡ ಯಾಳವಾರ, ಬಾಪುಗೌಡ ಪಾಟೀಲ್ ನಂದಿಹಳ್ಳಿ, ಮೌನೇಶ್ ಬಡಿಗೇರ, ಭೀಮರಾಯ ಪದ್ಮಾ, ಧರ್ಮರಾಯಗೌಡ ದ್ಯಾವಮ್ಮ, ಶರಣಗೌಡ ಪೊಲೀಸ್ ಪಾಟೀಲ್, ಚಂದ್ರಗೌಡ ಹಾಲಚೇಪಿ, ನಿಂಗಣಗೌಡ ದಳಪತಿ, ಶರಣಗೌಡ ಬಣವಗಿ, ಶರಣಗೌಡ ತಿಪ್ಪನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.