×
Ad

ಸೇಡಂ ನಗರದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ವ್ಯಾಪಾರಸ್ಥರ ಸಂಘದಿಂದ ಧರಣಿ

Update: 2026-05-19 22:27 IST

ಸೇಡಂ: ನಗರದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರನ್ನು ದೀರ್ಘಕಾಲದಿಂದ ಕಾಡುತ್ತಿರುವ ವಿವಿಧ ನಾಗರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಆಗ್ರಹಿಸಿ ಸೇಡಂ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಧರಣಿ ನಡೆಸಲಾಯಿತು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರು ವ್ಯಾಪಾರಸ್ಥರ ಅಹವಾಲುಗಳನ್ನು ಆಲಿಸಿ ಮನವಿ ಪತ್ರಗಳನ್ನು ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ರಾಜಶೇಖರ ಎಸ್.ನೀಲಂಗಿ, “ನಗರದ ಮೂಲಭೂತ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸದಿದ್ದರೆ ನಗರಸಭೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.

ಸಾರ್ವಜನಿಕರ, ವಿಶೇಷವಾಗಿ ಮಹಿಳೆಯರ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ ಕನಿಷ್ಠ ಐದು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಬೇಕು. ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡಿರುವ ವ್ಯಾಪಾರ ಚಟುವಟಿಕೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಮುಖ್ಯ ರಸ್ತೆಗಳಲ್ಲಿ ವಾಹನಗಳು ಹಾಗೂ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಊಡಗಿ ಕ್ರಾಸ್, ಬಸ್ ನಿಲ್ದಾಣ ಹಾಗೂ ಪ್ರಮುಖ ಚೌರಸ್ತೆಗಳ ಹತ್ತಿರ ಇರುವ ತರಕಾರಿ ಮಾರುಕಟ್ಟೆಗಳನ್ನು ಒಂದೇ ಸ್ಥಳಕ್ಕೆ ಸ್ಥಳಾಂತರಿಸಿ ಟ್ರಾಫಿಕ್ ದಟ್ಟಣೆ ನಿವಾರಿಸಬೇಕು ಎಂದು ಹೇಳಿದರು.

ನಗರದ ಶ್ರೀ ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಸರ್ಕಾರಿ ಆಸ್ಪತ್ರೆ ಬಳಿ ನಿರಂತರವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಟ್ರಾಫಿಕ್ ನಿಯಂತ್ರಣ ಕೈಗೊಳ್ಳಬೇಕು ಎಂದು ಅಗ್ರಹಿಸಿದ ಮುಖಂಡರು, ಶ್ರೀ ಹಾಲಪ್ಪಯ್ಯ ಮಠ ಎದುರಿನ ಹಿಂದೂ ರುದ್ರಭೂಮಿಗೆ ರಸ್ತೆ, ಶೆಡ್, ಕುಡಿಯುವ ನೀರು ಹಾಗೂ ವಿದ್ಯುತ್/ಸೋಲಾರ್ ದೀಪಗಳ ಸೌಲಭ್ಯ ಒದಗಿಸಬೇಕು, ರಾತ್ರಿ 10 ಗಂಟೆಯ ನಂತರ ಡಿಜೆ ಹಾಗೂ ಧ್ವನಿವರ್ಧಕ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ ಧ್ವನಿ ಮಾಲಿನ್ಯ ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಅಂಬಾರಾವ್ ಬಿ. ಪಾಟೀಲ್, ಪದಾಧಿಕಾರಿಗಳಾದ ಮನಹೋರ್ ಎಸ್. ದೋಂತಾ, ಅನಂತರಡ್ಡಿ ಎನ್. ಪಾಟೀಲ್, ಅನಿಲ್ ಜಿ. ಮಾಲ್ಪಾಣಿ, ದತ್ತಾತ್ರೇಯ ಎಸ್. ಐನಾಪುರ್, ಪ್ರಶಾಂತ್ ವಿ. ಮಹೀಂದ್ರಕರ್, ಅಬ್ದುಲ್ ಸತ್ತಾರ್, ಶ್ರೀನಿವಾಸ್ ಬಿ. ಕಸೋಜು, ತಾರಾರಾಮ್ ಜೆ. ಚೌಧರಿ ಸೇರಿದಂತೆ ನೂರಾರು ವ್ಯಾಪಾರಸ್ಥರು ಹಾಗೂ ವರ್ತಕರು ಭಾಗವಹಿಸಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News