ಕಲಬುರಗಿ| ಅಕ್ರಮ ಮದ್ಯ ಸಾಗಣೆ: 16 ಬಾಕ್ಸ್ ಮದ್ಯ ಜಪ್ತಿ; ಇಬ್ಬರು ಪೊಲೀಸ್ ವಶಕ್ಕೆ
ಕಲಬುರಗಿ; ಯಡ್ರಾಮಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಸಾಗಣೆ ಹಾಗೂ ಮಾರಾಟ ಜಾಲ ಸಕ್ರಿಯವಾಗಿರುವ ಆರೋಪದ ನಡುವೆ, ಶನಿವಾರ ಮಾಗಣಗೇರಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ದಿಢೀರ್ ಕಾರ್ಯಾಚರಣೆ ನಡೆಸಿ 16 ಬಾಕ್ಸ್ ಮದ್ಯ ಸಹಿತ ವಾಹನವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ನಾಗರಹಳ್ಳಿಯ ವಿಕೆಜಿ ವೈನ್ ಶಾಪ್ನಿಂದ ಮಾಗಣಗೇರಿ ಗ್ರಾಮದ ದಿನಸಿ ಅಂಗಡಿಗೆ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಾಹನವನ್ನು ತಡೆದಿದ್ದಾರೆ. ಕೆಎ-32 ಎಸಿ 3898 ನೋಂದಣಿ ಸಂಖ್ಯೆಯ ವಾಹನದಲ್ಲಿ ಮದ್ಯದ ಪೆಟ್ಟಿಗೆಗಳನ್ನು ಇಳಿಸುತ್ತಿದ್ದಾಗ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿದ್ದ ವಾಹನ ಚಾಲಕ ಮರೆಪ್ಪ ಹಾಗೂ ವೈನ್ ಶಾಪ್ ಸಿಬ್ಬಂದಿ ಮಹಬೂಬ್ ಅವರನ್ನು ತಡೆದು ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಯಡ್ರಾಮಿ ಪೊಲೀಸರು ವಾಹನ ಸಹಿತ ವಿವಿಧ ಬ್ರಾಂಡ್ಗಳ ಒಟ್ಟು 16 ಬಾಕ್ಸ್ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಜಪ್ತಿಯಾದ ಮದ್ಯದಲ್ಲಿ ಒರಿಜಿನಲ್ ಚಾಯ್ಸ್, ಕಿಂಗ್ಫಿಷರ್ ಬಿಯರ್, ಬಿಪಿ, ಎಂಸಿ ಹಾಗೂ ಐಬಿ ಬ್ರಾಂಡ್ಗಳ ಮದ್ಯ ಸೇರಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಗರಹಳ್ಳಿಯಿಂದ ಮಾಗಣಗೇರಿ, ಐನಾಪುರ, ಬೀರಾಳ, ಕಾಚಾಪುರ, ದುಮ್ಮದ್ರಿ, ವಡಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಜಾಲದ ಮೂಲ ಪತ್ತೆಹಚ್ಚಿ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.