ಕಲಬುರಗಿ| ಪ್ರತಿ ಟನ್ ಕಬ್ಬಿಗೆ 5,500 ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ
ಕಲಬುರಗಿ: ಪ್ರತಿ ಟನ್ ಕಬ್ಬಿಗೆ 5,500 ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಪೂರೈಸಬೇಕು ಎಂದು ಆಗ್ರಹಿಸಿ ನಗರದ ಜೇವರ್ಗಿ ರಸ್ತೆಯ ವಾಲ್ಮೀಕಿ ವೃತ್ತದಲ್ಲಿ ವಿವಿಧ ರೈತಪರ ಸಂಘಟನೆಗಳ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 1,000 ಹೆಚ್ಚುವರಿ ರಾಜ್ಯ ಸಲಹಾ ಬೆಲೆ (ಎಸ್ಎಪಿ) ನೀಡಬೇಕು. ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಉತ್ಪಾದನಾ ವೆಚ್ಚದ ಶೇ. 50ರಷ್ಟು ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸುವ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಕ್ವಿಂಟಾಲ್ ತೊಗರಿಗೆ 15,000 ಬೆಂಬಲ ಬೆಲೆ ಘೋಷಿಸಬೇಕು. ರೈತರ ಕೃಷಿ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 50ರ ಅನುಪಾತದಲ್ಲಿ ಮನ್ನಾ ಮಾಡಬೇಕು. ಬ್ಯಾಂಕ್ಗಳು ಕೃಷಿ ಸಾಲ ವಸೂಲಾತಿ ಮಾಡುವುದನ್ನು ತಡೆಹಿಡಿಯಬೇಕು ಎಂದು ರೈತರು ಆಗ್ರಹಿಸಿದರು.
ಕೃಷಿಗೆ ಮೊದಲ ಆದ್ಯತೆ ನೀಡಿ, ಸರ್ಕಾರ ಭರವಸೆ ನೀಡಿರುವಂತೆ ಕೃಷಿ ಪಂಪ್ಸೆಟ್ಗಳಿಗೆ ಕನಿಷ್ಠ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು. ಕೆರೆ-ಕಟ್ಟೆಗಳನ್ನು ನೀರಿನಿಂದ ತುಂಬಿಸಬೇಕು. ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಿ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ವಿಮಾ ಕಂಪನಿಗಳು ಬೆಳೆ ನಷ್ಟದ ಸಂಪೂರ್ಣ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಜಯಕುಮಾರ್ ಬಿರಾದಾರ, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್., ಪಿಡ್ಡಪ್ಪ ಜಾಲಗಾರ, ಮಹಾಂತಗೌಡ ನಂದಿಹಳ್ಳಿ, ಸಿದ್ರಾಮಯ್ಯ ಹಿರೇಮಠ, ಶಂಕರ ಉಮಾಶೆಟ್ಟಿ, ಸಾತಲಿಂಗಪ್ಪ ನೀಲೂರ, ಈರಣ್ಣ ಅಂಬಾಜಿ, ಶರಣಪ್ಪ ಹಾಳಮಳ್ಳಿ, ಶಿವರಾಜ್ ಪಾಟೀಲ್ ನಂದಿಕೂರ, ನಾಗರಾಜ ಮೇಲಕುಂದಾ, ಗಿರೆಪ್ಪಗೌಡ ಮಾಲಿಪಾಟೀಲ, ನಿಂಗಣ್ಣ ಕಣ್ಣಿ, ಆನಂದ ಕರಿಕಲ್, ಪ್ರತಿಭಾ ಹಿರೇಮಠ, ಸರ್ದಾರ್ ರಾಯಪ್ಪ, ಸಂತೋಷ್ ಪಾಟೀಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.