ಕಲಬುರಗಿ: ನಗರದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಿ.ಟಿ.ಸಿ. (ಪೌರತ್ವ ತರಬೇತಿ ಶಿಬಿರ)ದ ಹೆಸರಿನಲ್ಲಿ ಬಿ.ಎಡ್. ವಿದ್ಯಾರ್ಥಿನಿಯರಿಂದ ಕಾಲೇಜು ಕಟ್ಟಡಕ್ಕೆ ಬಣ್ಣ ಬಳಿಯಿಸುವುದು, ಗ್ರಿಲ್‌ಗಳಿಗೆ ಬಣ್ಣ ಹಚ್ಚಿಸುವುದು ಹಾಗೂ ಸುಂದರೀಕರಣದ ಕೆಲಸ ಮಾಡಿಸಿರುವುದನ್ನು ಖಂಡಿಸಿರುವ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ ಪಿ. ಭರಣಿ, ಸಂಬಂಧಪಟ್ಟ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ, ಸಿ.ಟಿ.ಸಿ. ಶಿಬಿರವು ವಿದ್ಯಾರ್ಥಿಗಳಲ್ಲಿ ನಾಗರಿಕ ಪ್ರಜ್ಞೆ, ಸಾಮಾಜಿಕತೆ, ನಾಯಕತ್ವ ಗುಣ, ತಂಡದ ಕೆಲಸ ಹಾಗೂ ಸಮುದಾಯ ಜೀವನದ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ಆದರೆ, ಶಿಬಿರದ ಹೆಸರಿನಲ್ಲಿ ವಿದ್ಯಾರ್ಥಿನಿಯರಿಂದ ಕಾಲೇಜು ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿಯಿಸುವುದು, ಗ್ರಿಲ್‌ಗಳಿಗೆ ಬಣ್ಣ ಹಚ್ಚಿಸುವುದು ಹಾಗೂ ಕಟ್ಟಡದ ಸುಂದರೀಕರಣದ ಕೆಲಸ ಮಾಡಿಸಿರುವುದು ನಿಯಮಬಾಹಿರವಾಗಿದೆ ಎಂದು ಆರೋಪಿಸಿದ್ದಾರೆ.

ಶಿಬಿರಕ್ಕೆ ಅನುಮತಿ ಪಡೆದಿರುವ ಕುರಿತು ವಿಚಾರಿಸಿದಾಗ, ಯಾವುದೇ ಅನುಮತಿ ಪಡೆದಿಲ್ಲ ಎಂದು ಕಾಲೇಜಿನವರು ತಿಳಿಸಿದ್ದಾರೆ. ಕಟ್ಟಡ ಹಳೆಯದಾಗಿದ್ದು, ಅದರ ಸುಂದರೀಕರಣಕ್ಕಾಗಿ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಅನುದಾನದ ಕೊರತೆಯಿಂದ ಕ್ರಮ ಕೈಗೊಂಡಿಲ್ಲ. ದಾನಿಗಳು ಬಣ್ಣ ನೀಡಿರುವುದರಿಂದ ತಾವೇ ಬಣ್ಣ ಬಳಿಯಿಸುತ್ತಿರುವುದಾಗಿ ಕಾಲೇಜಿನವರು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಪ್ರಶ್ನಿಸಲು ತೆರಳಿದ ವೇದಿಕೆಯ ಮುಖಂಡರೊಂದಿಗೆ ಪ್ರಾಂಶುಪಾಲರು ಹಾಗೂ ಶಿಕ್ಷಕರು ವಾದವಿವಾದಕ್ಕೆ ಇಳಿದಿದ್ದು, ವಿದ್ಯಾರ್ಥಿನಿಯರನ್ನು ಮುಂದಿಟ್ಟುಕೊಂಡು ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತೆ ಮಾಡಿದ್ದಾರೆ. ಅಲ್ಲದೆ, ವಿಡಿಯೊ ಚಿತ್ರೀಕರಣ ಮಾಡುತ್ತಿದ್ದವರನ್ನು ಕಾಲೇಜಿನ ಗೇಟ್ ಮುಚ್ಚಿ ಮುತ್ತಿಗೆ ಹಾಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯರಿಂದ ಕಾಲೇಜು ಕಟ್ಟಡಕ್ಕೆ ಬಣ್ಣ ಬಳಿಯಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ನವೆಂಬರ್ 3ರಂದು ಜಿಲ್ಲಾಧಿಕಾರಿಗಳು, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳು, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂದೀಪ ಪಿ. ಭರಣಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor