×
Ad

Kalaburagi | ಅಯ್ಯನ ಕಥೆಗಳು ಮಕ್ಕಳಿಗೆ ದಾರಿದೀಪ : ಡಾ.ಸತೀಶ್ ಹೊಸಮನಿ

ಮಹಾದೇವಪ್ಪ ಕಡೇಚೂರ್ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಕಥಾಸಂಕಲನ ಬಿಡುಗಡೆ

Update: 2026-06-24 19:18 IST

ಕಲಬುರಗಿ : ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಅವರು ಬದುಕಿನುದ್ದಕ್ಕೂ ಆದರ್ಶಮಯ ಜೀವನ ನಡೆಸಿದ್ದು, ಅವರ ಬದುಕಿನ ಅನುಭವಗಳು ಹಾಗೂ ಸಾಮಾಜಿಕ ಕಾಳಜಿಯೇ ‘ಅಯ್ಯನ ಕಥೆಗಳು’ ಕೃತಿಯಲ್ಲಿ ಪ್ರತಿಬಿಂಬಿತವಾಗಿವೆ ಎಂದು ರಾಜ್ಯ ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸತೀಶ್ ಎಸ್. ಹೊಸಮನಿ ಹೇಳಿದರು.

ನಗರದ ಬೃಂದಾವನ ಗ್ರ್ಯಾಂಡ್ ಹೋಟೆಲ್‌ನ ‘ಬಲದೇವ್’ ಸಭಾಂಗಣದಲ್ಲಿ ಮಹಾದೇವಪ್ಪ ಕಡೇಚೂರ್ ಅವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ‘ಅಯ್ಯನ ಕಥೆಗಳು’ ಸಣ್ಣಕಥೆಗಳ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂತಹ ಮೌಲ್ಯಯುತ ಕಥೆಗಳ ಸಂಕಲನ ಮಕ್ಕಳಿಗೆ ದಾರಿದೀಪವಾಗಿದ್ದು, ಕ್ರೀಡೆ, ಸ್ನೇಹ, ಓದುವ ಹವ್ಯಾಸ, ಸಾಹಸ, ಮಹಾಪುರುಷರ ಜೀವನ ಹಾಗೂ ಪ್ರಾಣಿ ಪ್ರೀತಿ ಸೇರಿದಂತೆ ಹಲವು ಮೌಲ್ಯಾಧಾರಿತ ಕಥೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಪಿ.ಎಸ್. ಶಂಕರ್ ಹಾಗೂ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪ ನಿರ್ದೇಶಕ ವೀರಶೆಟ್ಟಿ ಬಿ. ಗಾರಂಪಳ್ಳಿ ಅವರು ಕೃತಿಯ ಪರಿಚಯ ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ್ ಮಾತನಾಡಿ, ಮೌಲ್ಯಗಳು ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ಮಕ್ಕಳ ಮನೋಧರ್ಮಕ್ಕೆ ಅನುಗುಣವಾಗಿ ಕಥೆಗಳ ಮೂಲಕ ನೀತಿ ಬೋಧಿಸಲು ಮಹಾದೇವಪ್ಪ ಕಡೇಚೂರ್ ಪ್ರಯತ್ನಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ಅನ್ಯಾಯ ಹಾಗೂ ಶೋಷಣೆಯ ವಿರುದ್ಧ ಎಚ್ಚರಿಸುವ ಸಂದೇಶಗಳನ್ನು ಕಥೆಗಳು ಒಳಗೊಂಡಿವೆ ಎಂದು ಹೇಳಿದರು.

ಧರ್ಮದರ್ಶಿ ವೆಂಕಟೇಶ ಎಂ ಕಡೇಚೂರ್, ಚಂದ್ರಕಾಂತ ಗುತ್ತೇದಾರ್, ಡಾ. ಹನುಮಂತ್ ರಾವ್ ದೊಡ್ಡಮನಿ, ಬೋಡೆ ರಿಯಾಝ್ ಅಹಮ್ಮದ್, ಮಹಾದೇವಯ್ಯ ಕರದಳ್ಳಿ, ಸಂಧ್ಯಾ ಹೊನಗುಂಟಿಕರ್,ನಾರಾಯಣ ಕುಲಕರ್ಣಿ,ಚಿತ್ರಶೇಖರ ಕಂಠಿ, ಸುಬ್ರಾವ್ ಕುಲಕರ್ಣಿ, ಪ್ರಭಾಕರ ಜೋಶಿ ಸೇಡಂ,ಜಮುನಾ ಗುತ್ತೇದಾರ್, ಭೀಮಣ್ಣ ಬೋನಾಳ, ಡಾ. ಸುರೇಶ್ ಹೇರೂರು, ಲಕ್ಷ್ಮಣರಾವ್ ಪೊಲೀಸ್ ಪಾಟೀಲ್, ವೀರಭದ್ರ ಸಿಂಪಿ, ಬಿ ಆರ್ ಅಣ್ಣ ಸಾಗರ್, ಕುಪೇಂದ್ರ ಶಾಸ್ತ್ರಿ ಕೃಷ್ಣಮೂರ್ತಿ ಹಳ್ಳಿಖೇಡ್ ಅನಿಲ್ ಕುಮಾರ್ ಎಚ್ ಎನ್, ಶಾಂತಾ ಭೀಮಸೇನ್ ರಾವ್ ಮತ್ತಿತರ ಅನೇಕರು ಉಪಸ್ಥಿತರಿದ್ದರು.ಡಾ. ಸದಾನಂದ ಪೆರ್ಲ ಸ್ವಾಗತ ಕೋರಿದರು. ಕಿರಣ್ ಪಾಟೀಲ್ ಪ್ರಾರ್ಥನಾ ಗೀತೆ ಹಾಡಿದರು. ಡಾ. ಗವಿಸಿದ್ದಪ್ಪ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

ಲೇಖಕನ ಜವಾಬ್ದಾರಿ ಅನಾವರಣ

ಸಮಾಜದ ನೈತಿಕ ಶುದ್ಧೀಕರಣಕ್ಕಾಗಿ ಕಥಾಹಂದರ ಹೆಣೆದು ಲೇಖಕ ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿರುವ ಕೃತಿ ಇದಾಗಿದೆ. ಕಥೆಗಳ ಪಾತ್ರ, ಭಾಷೆ ಮತ್ತು ಶೈಲಿ ಸರಳವಾಗಿದ್ದು, ಮಣ್ಣಿನ ಸೊಗಡನ್ನು ಬಿಂಬಿಸುತ್ತವೆ. ಪ್ರೌಢಶಾಲೆಯಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ನೀತಿ ಬೋಧನೆ ಮಾಡುವ ಉತ್ತಮ ಕೃತಿಯಾಗಿದೆ ಎಂದು ವೀರಶೆಟ್ಟಿ ಬಿ. ಗಾರಂಪಳ್ಳಿ ಅಭಿಪ್ರಾಯಪಟ್ಟರು.

ಕಡೇಚೂರ್ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ನೀಡಲು ಸಲಹೆ

ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ಮೌಲ್ಯಗಳು ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮಹಾದೇವಪ್ಪ ಕಡೇಚೂರ್ ಅವರ ಬದುಕು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಅವರ ಹೆಸರಿನಲ್ಲಿ ಪ್ರತಿಷ್ಠಾನವು ಪ್ರತಿವರ್ಷ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಪರಂಪರೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು.

ಪುಸ್ತಕ ಬಿಡುಗಡೆ ಪದ್ಧತಿ ಬದಲಾಗಬೇಕು

ಹಿರಿಯ ವೈದ್ಯ ಡಾ. ಪಿ.ಎಸ್. ಶಂಕರ್ ಮಾತನಾಡಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು ಲೇಖಕ ಮತ್ತು ಓದುಗರ ನಡುವೆ ನೇರ ಸಂವಾದ ನಡೆಯುವ ಮಾದರಿಯಲ್ಲಿ ಆಯೋಜನೆಯಾಗಬೇಕು. ಇದರಿಂದ ಕೃತಿಯ ಒಳನೋಟಗಳು ಪರಿಣಾಮಕಾರಿಯಾಗಿ ಅನಾವರಣಗೊಳ್ಳಲಿದ್ದು, ಓದುಗರೊಂದಿಗೆ ಲೇಖಕರ ಬಾಂಧವ್ಯವೂ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News