×
Ad

ಶೀಘ್ರದಲ್ಲಿ ಕಲಬುರಗಿಯಲ್ಲಿ ಮತ್ತೊಂದು ಬೃಹತ್ ಉದ್ಯೋಗ ಮೇಳ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್

Update: 2026-06-24 20:45 IST

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ, ವಿಶೇಷವಾಗಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಮತ್ತೊಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ತಿಳಿಸಿದ್ದಾರೆ.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಯೋಗ ಮೇಳದಲ್ಲಿ ಮರ್ಸಿಡಿಸ್ ಬೆಂಝ್, ಸ್ನೈಡರ್ ಎಲೆಕ್ಟ್ರಿಕ್, ಬಜಾಜ್ ಆಟೋ, ಜೆಸಿಬಿ, ಡಿ-ಮಾರ್ಟ್, ಮಹೀಂದ್ರಾ, ವರ್ಲ್‍ಪೂಲ್ ಸೇರಿದಂತೆ ದೇಶ-ವಿದೇಶಗಳ ಖ್ಯಾತ ಕಂಪನಿಗಳು ಭಾಗವಹಿಸುತ್ತಿದ್ದು, ಒಟ್ಟು 3,500ಕ್ಕೂ ಹೆಚ್ಚು ಹುದ್ದೆಗಳನ್ನು ಗುರುತಿಸಲಾಗಿದೆ. ಆಟೋಮೊಬೈಲ್, ಉತ್ಪಾದನೆ, ಎಂಜಿನಿಯರಿಂಗ್, ರಿಟೇಲ್, ಐಟಿ ಹಾಗೂ ಸೇವಾ ವಲಯದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು, ಪುಣೆ ಮತ್ತು ಹೈದರಾಬಾದ್‍ನಲ್ಲಿ ಕೆಲಸ ಮಾಡಲು ಸುವರ್ಣಾವಕಾಶವಿದೆ ಎಂದು ಹೇಳಿದರು.

ಅರ್ಹತೆ ಮತ್ತು ಉಚಿತ ನೋಂದಣಿ :

10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೋಮೋ ಬಿ.ಇ/ಬಿ.ಟೆಕ್ ಹಾಗೂ ಯಾವುದೇ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಸಂಪೂರ್ಣ ಉಚಿತವಾಗಿ ಆನ್‍ಲೈನ್ ನೋಂದಣಿಗೆ ಅವಕಾಶ ನೀಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ನೋಂದಣಿಯಾದ ಬಳಿಕ ಮೇಳದ ನಿಖರ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸಲಾಗುವುದು. ಆರಂಭಿಕ ಸುತ್ತಿನ ಸಂದರ್ಶನಗಳು ಆನ್‍ಲೈನ್ ಮೂಲಕವೇ ನಡೆಯಲಿದ್ದು, ಶಾರ್ಟ್‍ಲಿಸ್ಟ್ ಆದವರಿಗೆ ಮಾತ್ರ ನೇರ ಸಂದರ್ಶನವಿರಲಿದೆ ಎಂದು ಹೇಳಿದರು.

10ನೇ, 12ನೇ, ITI, ಡಿಪ್ಲೊಮಾ ಹಾಗೂ ಪದವೀಧರರಿಗೆ, https://forms.gle/8XCtqKmTmd7KZrW77 ಈ ನೋಂದಣಿ ಲಿಂಕ್ ಬಳಸಬೇಕು. B.E / B.Tech ವಿದ್ಯಾರ್ಥಿಗಳಿಗೆ https://forms.gle/ikTzHpfLRN8KqJUg8 ಈ ನೋಂದಣಿ ಲಿಂಕ್ ಬಳಸಿಕೊಂಡು ನೋಡಣಿ ಮಾಡಿಕೊಳ್ಳಬಹುದು.

ಶೀಘ್ರದಲ್ಲೇ 56,000 ಸರ್ಕಾರಿ ಹುದ್ದೆಗಳ ಭರ್ತಿ :

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಖಾಲಿ ಇರುವ 56,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ನಿಗದಿತ ಕಾಲಮಿತಿಯೊಳಗೆ ಭರ್ತಿ ಮಾಡಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಅಲ್ಲದೆ, ಕನ್ನಡಿಗರಿಗೆ ಶೇ. 80 ರಷ್ಟು ಉದ್ಯೋಗ ಸಿಗುತ್ತಿರುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News