ಕಲಬುರಗಿ | ವಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ: ಡಿಎಚ್ಒಗೆ ಬಿಜೆಪಿ ಮನವಿ
ವಾಡಿ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಬಿಜೆಪಿ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ಚಿಕಿತ್ಸೆಗೆ ಆಗಮಿಸುವ ಬಡ ಹಾಗೂ ಗ್ರಾಮೀಣ ಭಾಗದ ರೋಗಿಗಳೊಂದಿಗೆ ವೈದ್ಯಕೀಯ ಮತ್ತು ಆಡಳಿತ ಮಂಡಳಿಯ ಸಿಬ್ಬಂದಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ರೋಗಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಗೂ ಸಣ್ಣಪುಟ್ಟ ತಾಂತ್ರಿಕ ದೋಷಗಳಿಂದಾಗಿ ಕೊಳೆಯುತ್ತಿವೆ. ಇದರಿಂದ ಅಪಘಾತ ಮತ್ತು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗದೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿಗಳು ತಕ್ಷಣವೇ ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು. ಕರ್ತವ್ಯಲೋಪದ ಹಿನ್ನೆಲೆ ವೈದ್ಯರನ್ನು, ಸಿಬ್ಬಂದಿಯನ್ನು ವಜಾಗಿಳಿಸಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಒಂದು ವಾರದೊಳಗೆ ಸರಿಪಡಿಸದಿದ್ದರೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಸ್ಥಳೀಯ ಮುಖಂಡರಾದ ಪ್ರಕಾಶ ಪೂಜಾರಿ, ರಾಜು ಶಾಲಿ, ಮಲ್ಲಿಕಾರ್ಜುನ ಸಾತಖೇಡ ಉಪಸ್ಥಿತರಿದ್ದರು.