ಕಲಬುರಗಿ ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ; 1.45 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ
ಕಲಬುರಗಿ: ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಕಲಬುರಗಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ವಿವಿಧ ಕಂಪನಿಗಳ ಸುಮಾರು 1,44,90,000 ರೂ. ಮೌಲ್ಯದ 785 ಮೊಬೈಲ್‌ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಹೇಳಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾಲೀಕರಿಗೆ ಮೊಬೈಲ್ ಹಸ್ತಾಂತರಿಸಿ ಮಾತನಾಡಿದ ಅವರು, ಬಸ್ ನಿಲ್ದಾಣ, ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಜನರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳ ಕಳೆದುಕೊಂಡ ಬಗ್ಗೆ ಇ-ಲಾಸ್ಟ್ ಮತ್ತು ಸಿಇಐಆರ್ (CEIR) ಪೋರ್ಟಲ್‌ನಲ್ಲಿ ದಾಖಲಿಸಿದ್ದ ದೂರುಗಳ ಆಪರೇಷನ್ ಭರವಸೆ’ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.
ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ:
ಪೊಲೀಸರು ವಶಪಡಿಸಿಕೊಂಡ 785 ಮೊಬೈಲ್‌ಗಳ ಪೈಕಿ ಕರ್ನಾಟಕದಲ್ಲಿ 688, ಮಹಾರಾಷ್ಟ್ರದಲ್ಲಿ 41 ಮತ್ತು ತೆಲಂಗಾಣದಲ್ಲಿ 23 ಫೋನ್‌ಗಳು ಪತ್ತೆಯಾಗಿವೆ. ಕರ್ನಾಟಕದ ಒಳಗಡೆ ಕಲಬುರಗಿ ನಗರದಲ್ಲಿ ಅತಿ ಹೆಚ್ಚು ಅಂದರೆ 487 ಮೊಬೈಲ್‌ಗಳು ದೊರೆತರೆ, ವಿಜಯಪುರ (20), ಬೀದರ್ (18) ಮತ್ತು ಬೆಂಗಳೂರಿನಲ್ಲಿಯೂ (17) ಕಳವಾದ ಫೋನ್‌ಗಳನ್ನು ಖಾಕಿ ಪಡೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದರು.
ಮೊಬೈಲ್ ಫೋನ್‌ಗಳ ಭದ್ರತೆಗಾಗಿ ಸಾರ್ವಜನಿಕರು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಮೊಬೈಲ್‌ಗಳಿಗೆ ಕಡ್ಡಾಯವಾಗಿ ಸ್ಟ್ರಾಂಗ್ ಪಾಸ್‌ವರ್ಡ್ ಅಥವಾ ಥಂಬ್ ಲಾಕ್ ಅಳವಡಿಸಬೇಕು. 'ಫೈಂಡ್ ಮೈ ಡಿವೈಸ್' ಸೆಟ್ಟಿಂಗ್ ಸಕ್ರಿಯವಾಗಿರಲಿ. ಒಂದು ವೇಳೆ ಮೊಬೈಲ್ ಕಳೆದುಕೊಂಡರೆ ತಕ್ಷಣವೇ 'ಇ-ಲಾಸ್ಟ್' ಅಥವಾ 'ಸಿಇಐಆರ್' ಪೋರ್ಟಲ್‌ನಲ್ಲಿ ದೂರು ದಾಖಲಿಸಿ. ಇದರಿಂದ ನಿಮ್ಮ ಫೋನ್ ದುರ್ಬಳಕೆಯಾಗುವುದನ್ನು ತಡೆಯಬಹುದು ಹಾಗೂ ಪೊಲೀಸರಿಗೆ ಪತ್ತೆ ಹಚ್ಚಲು ಸುಲಭವಾಗುತ್ತದೆ ಎಂದು ಹೇಳಿದರು.
ದೂರುಗಳನ್ವಯ ಕಲಬುರಗಿಯಲ್ಲಿ 487, ಕಲಬುರಗಿ ಗ್ರಾಮೀಣ ಪ್ರದೇಶದಲ್ಲಿ 103, ವಿಜಯಪುರದಲ್ಲಿ 20, ಬೀದರ್‌ನಲ್ಲಿ 18, ಬೆಂಗಳೂರಿನಲ್ಲಿ 17, ಯಾದಗಿರಿಯಲ್ಲಿ 16, ರಾಯಚೂರಿನಲ್ಲಿ 12, ವಿಜಯನಗರದಲ್ಲಿ 8, ಬಳ್ಳಾರಿಯಲ್ಲಿ 7 ಸೇರಿದಂತೆ ರಾಜ್ಯದಲ್ಲಿ 688 ಮೊಬೈಲ್ ಫೋನ್‌ಗಳು ಪತ್ತೆ ಮಾಡಲಾಗಿದೆ. ಇದಲ್ಲದೇ, ಮಹಾರಾಷ್ಟ್ರದಲ್ಲಿ 41, ಆಂಧ್ರದಲ್ಲಿ 23, ತೆಲಂಗಾಣದಲ್ಲಿ 23, ಬಿಹಾರದಲ್ಲಿ 7 ಹಾಗೂ ಉತ್ತರ ಪ್ರದೇಶದಲ್ಲಿ 3 ಸೇರಿದಂತೆ ಒಟ್ಟು 785 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಶಾಲೂ, ಪ್ರವೀಣ ನಾಯಕ, ಎಸಿಪಿಗಳಾದ ಶರಣಬಸಪ್ಪ ಸುಬೇದಾರ, ಜೇಮ್ಸ್ ಮಿನೇಜಸ್, ಬಸವೇಶ್ವರ ಹೀರಾ, ಇನ್‌ಸ್ಪೆಕ್ಟರ್‌ಗಳಾದ ವಾಜೀದ್ ಪಟೇಲ್, ಸತೀಶ ಕಣಮೇಶ್ವರ, ಸುಶೀಲಕುಮಾರ, ಅರುಣಕುಮಾರ, ನಟರಾಜ ಲಾಡೆ, ಚಂದ್ರಶೇಖರ ತಿಗಡಿ, ಗುರುಲಿಂಗಪ್ಪ ಪಾಟೀಲ, ಹುಸೇನ್ ಬಾಷಾ, ಖಾಜಾ ಹುಸೇನ್ ಸೇರಿದಂತೆ ಹಲವರು ಇದ್ದರು.
‘ಸಾರ್ವಜನಿಕರು ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಾಗ ಕಡ್ಡಾಯವಾಗಿ ಇ–ಲಾಸ್ಟ್/ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು. ಬಸ್, ರೈಲು ನಿಲ್ದಾಣ ಸೇರಿದಂತೆ ಯಾವುದೇ ಕಡೆಗಳಲ್ಲಿ ದಾಖಲೆಗಳು ಇಲ್ಲದ, ಕಡಿಮೆ ಬೆಲೆಗೆ ಸಿಗುವ ಮೊಬೈಲ್ ಫೋನ್‌ಗಳನ್ನು ಖರೀದಿಸಬೇಡಿ. ಅಪರಿಚಿತರು ಮಾರುವ ಮೊಬೈಲ್‌ಗಳು, ಕದ್ದ ವಸ್ತುಗಳಾಗಬಹುದು. ಇವುಗಳಿದ ಜನರು ಎಚ್ಚರಿಕೆಯಿಂದಿರಬೇಕು.
_ ಡಾ.ಶರಣಪ್ಪ ಎಸ್.ಡಿ (ಪೊಲೀಸ್ ಕಮೀಷನರ್, ಕಲಬುರಗಿ)