ಕಲಬುರಗಿ| ಪಿಣರಾಯಿ ವಿಜಯನ್ ನಿವಾಸದ ಮೇಲಿನ ಈಡಿ ದಾಳಿಯನ್ನು ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ
ಕಲಬುರಗಿ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿರುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ವತಿಯಿಂದ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, “ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ದಾಳಿಯು ರಾಜಕೀಯ ಸೇಡು ತೀರಿಸಿಕೊಳ್ಳುವ ಕ್ರಮವಾಗಿದೆ. ಬಿಜೆಪಿ ಸರ್ಕಾರ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಈಡಿ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸುತ್ತಿದೆ” ಎಂದು ಆರೋಪಿಸಿದರು.
“ಪ್ರತಿಭಟನೆ ನಡೆಸುತ್ತಿದ್ದ ಹಿರಿಯ ನಾಯಕರು ಸೇರಿದಂತೆ ಹಲವರನ್ನು ದಿಲ್ಲಿ ಪೊಲೀಸರು ಬಲವಂತವಾಗಿ ಬಂಧಿಸಿರುವುದು ಖಂಡನೀಯ. ಹಿರಿಯ ನಾಯಕಿ ಬೃಂದಾ ಕಾರಟ್, ಪೊಲಿಟ್ ಬ್ಯೂರೋ ಸದಸ್ಯರಾದ ಅಶೋಕ್ ಧವಳೆ, ಮರಿಯಮ್ ಧವಳೆ ಸೇರಿದಂತೆ ಅನೇಕ ನಾಯಕರ ಬಂಧನವು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯಾಗಿದೆ” ಎಂದು ಹೇಳಿದರು.
ಪಿಣರಾಯಿ ವಿಜಯನ್ ಅವರಿಗೆ ಎಕ್ಸಲಾಜಿಕ್ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಪದೇಪದೇ ಗಮನಿಸಿದ್ದರೂ, ರಾಜಕೀಯ ಉದ್ದೇಶದಿಂದ ಅವರನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಅವರು ದೂರಿದರು.
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಈಡಿ ಕ್ರಮ ಕೈಗೊಳ್ಳುತ್ತಿರುವುದು ಕೋಮುವಾದಿ-ಕಾರ್ಪೊರೇಟ್ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಹೋರಾಟದ ಐಕ್ಯತೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ ಅವರು, “ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳಒಪ್ಪಂದ ಇರುವ ಶಂಕೆ ಮೂಡುತ್ತಿದೆ” ಎಂದು ಟೀಕಿಸಿದರು.
ಪಕ್ಷವು ಯಾವುದೇ ತನಿಖಾ ಪ್ರಕ್ರಿಯೆಗೆ ವಿರೋಧಿಯಲ್ಲ. ಆದರೆ, ಕೇಂದ್ರೀಯ ತನಿಖಾ ಸಂಸ್ಥೆಗಳ ರಾಜಕೀಯ ದುರುಪಯೋಗವನ್ನು ಒಪ್ಪಲಾಗುವುದಿಲ್ಲ. ವಿರೋಧ ಪಕ್ಷಗಳ ನಾಯಕರ ಮೇಲಿನ ದಾಳಿ ಹಾಗೂ ಪ್ರಜಾಪ್ರಭುತ್ವ ಹಕ್ಕುಗಳ ಹರಣದ ವಿರುದ್ಧ ದೇಶಾದ್ಯಂತ ಬಲವಾದ ಹೋರಾಟಗಳನ್ನು ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಶ್ರೀಮಂತ ಬಿರಾದಾರ, ಶಾಂತಾ ಘಂಟಿ, ಲವಿತ್ರ ವಸ್ತ್ರದ, ಪದ್ಮಿನಿ ಕಿರಣಗಿ, ಪ್ರಭು ಪ್ಯಾರಾಬುದ್ದಿ, ಚಂದಮ್ಮ, ಗುರು ಚಾಂದಕವಠೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.