Kalaburagi | ಭೀಮಾನದಿಗೆ ಒಳಹರಿವು ಹೆಚ್ಚಳ ಹಿನ್ನೆಲೆ; ನದಿ ತೀರದ ಗ್ರಾಮಸ್ಥರು ಎಚ್ಚರದಿಂದಿರಲು ಡಿ.ಸಿ. ಮನವಿ
ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್
ಕಲಬುರಗಿ: ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ 80,000 ಕ್ಯೂಸೆಕ್ ಹಾಗೂ ವೀರ ಜಲಾಶಯದಿಂದ 63,323 ಕ್ಯೂಸೆಕ್, ಹೀಗೆ ಒಟ್ಟು 1,43,323 ಕ್ಯೂಸೆಕ್ ಪ್ರಮಾಣದ ನೀರನ್ನು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ನದಿಯ ನೀರಾವರಿ ಮಟ್ಟ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದಿರಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಇಕ್ರಮ್ ಶರೀಫ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ ಸುಮಾರು 44,000 ಕ್ಯೂಸೆಕ್ ಪ್ರಮಾಣದ ನೀರನ್ನು ನಾಳೆ ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಗೇಟ್‌ಗಳನ್ನು ತೆಗೆದು ಇನ್ನೂ ಹೆಚ್ಚಿನ ನೀರನ್ನು ಹರಿಬಿಡುವ ಸಾಧ್ಯತೆ ಇರುವುದರಿಂದ 5 ತಾಲೂಕುಗಳಲ್ಲಿ (ಹೈ ಅಲರ್ಟ್) ನೀರಿನ ಮಟ್ಟ ಏರಿಕೆಯಾಗಲಿರುವ ಕಾರಣ ಅಫಜಲಪುರ, ಜೇವರ್ಗಿ, ಶಹಾಬಾದ್, ಕಲಬುರಗಿ ಹಾಗೂ ಚಿತ್ತಾಪುರ ತಾಲೂಕುಗಳ ಭೀಮಾ ನದಿ ತೀರದ ಗ್ರಾಮಗಳ ಸಾರ್ವಜನಿಕರು ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ.
ಜಿಲ್ಲಾಡಳಿತ ನೀಡಿರುವ ಪ್ರಮುಖ ಮುನ್ನೆಚ್ಚರಿಕಾ ಕ್ರಮಗಳು:
ಯಾವುದೇ ಕಾರಣಕ್ಕೂ ಭೀಮಾ ನದಿ ಹಾಗೂ ಅದರ ಉಪನದಿಗಳ ಬಳಿ ಹೋಗಬಾರದು. ಜಾನುವಾರುಗಳನ್ನು ನದಿ ತೀರದಲ್ಲಿ ಮೇಯಿಸಲು ಅಥವಾ ನೀರು ಕುಡಿಸಲು ಕರೆದೊಯ್ಯಬಾರದು.
ಮಕ್ಕಳು ನದಿ ತೀರದ ಪ್ರದೇಶಗಳಿಗೆ ಹೋಗದಂತೆ ಪೋಷಕರು ವಿಶೇಷ ನಿಗಾ ವಹಿಸಬೇಕು.
ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಸ್ಥಳೀಯ ಆಡಳಿತದಿಂದ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಮೀನುಗಾರರು ಭೀಮಾ ನದಿಯಲ್ಲಿ ಮೀನುಗಾರಿಕೆ ಸೇರಿದಂತೆ ಯಾವುದೇ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಬಾರದು.
ಯಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ಕೂಡಲೇ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ತಾಲೂಕು ಆಡಳಿತವನ್ನು ಸಂಪರ್ಕಿಸಬೇಕು.
ಸಾರ್ವಜನಿಕರು ನದಿ ದಂಡೆಯಲ್ಲಿ ಅನಗತ್ಯವಾಗಿ ಸಂಚರಿಸುವುದು, ನದಿಯೊಳಗೆ ಇಳಿಯುವುದು, ನದಿಯನ್ನು ದಾಟಲು ಪ್ರಯತ್ನಿಸುವುದು ಹಾಗೂ ನದಿ ತೀರದಲ್ಲಿ ಅಥವಾ ನದಿಯ ಸಮೀಪ ಸೆಲ್ಫಿ (Selfie) ತೆಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.