ವಾಡಿ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ವಾಡಿ: ವಿಜ್ಞಾನ ಮತ್ತು ಗಣಿತ ಪಠ್ಯ ಬೋಧನೆ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುವುದರಿಂದ ವೈಜ್ಞಾನಿಕ ಜ್ಞಾನ ಸಂಪತ್ತು ಸಾಧನೆಗೆ ಅನುಕೂಲವಾಗುತ್ತದೆ ಎಂದು ಸ್ಥಳೀಯ ಠಾಣೆಯ ಪಿಎಸ್ಐ ಕೆ.ತಿರುಮಲೇಶ ಹೇಳಿದರು.
ಶನಿವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಗಣಿತ ಸಾಮಾಗ್ರಿಗಳ ಪ್ರಾಯೋಗಿಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಚಟುವಟಿಕೆಗಳ ಪ್ರದರ್ಶನಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸೃಜನಶೀಲತೆ ಬೆಳೆಯುತ್ತದೆ. ವಸತಿ ಶಾಲೆಗಳಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರ ಲಾಭ ಪಡೆದುಕೊಳ್ಳುವ ಮೂಲಕ ಮಕ್ಕಳು ಪ್ರತಿಭೆ ಮೆರೆಯಬೇಕು. ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು. ಇಲ್ಲಿನ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಮಾಧಾನ ತರಿಸಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಕರುಣಾದೇವಿ ಗೋಡಬೋಲೆ, ನಮ್ಮ ಮಕ್ಕಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ತಾವೇ ಸ್ವತಃ ಯೋಚಿಸಿ, ತಯಾರಿಸಿದ ವೈಜ್ಞಾನಿಕ ಮತ್ತು ಗಣಿತ ಮಾದರಿಗಳನ್ನು ಪ್ರದರ್ಶಿಸುವಂತಾಗಬೇಕು. ಮಕ್ಕಳಲ್ಲಿ ಸೃಜನಶೀಲತೆ ಮೂಡಬೇಕು. "ಓದಿ-ಮಾಡಿ-ಕಲಿ" ಎಂಬುದೇ ನಮ್ಮ ಶಾಲೆಯ ಧ್ಯೇಯವಾಗಿದೆ. ಮಗುವಿನ ಬೆಳವಣಿಗೆಯಲ್ಲಿ ಶಾಲೆ ಮತ್ತು ಮನೆಯ ಪಾತ್ರ ಸಮಾನವಾಗಿದೆ. ಪೋಷಕರ ಸಹಕಾರವಿಲ್ಲದೆ ಮಗುವನ್ನು ಉತ್ತಮ ಪ್ರಜೆಯನ್ನಾಗಿ ಮಾಡಲು ಸಾಧ್ಯವಿಲ್ಲ. ನಿಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಬೇಕು. ನಮ್ಮ ಶಾಲೆಯ ಶಿಕ್ಷಕರು ದಿನರಾತ್ರಿ ಶ್ರಮಿಸಿ ಮಕ್ಕಳನ್ನು ರೂಪಿಸುತ್ತಿದ್ದಾರೆ ಎಂದರು.
ನಂತರ ನಡೆದ ಪೋಷಕರ ಸಭೆಯಲ್ಲಿ ಶಾಲೆಯ ಪ್ರಗತಿ, ವಿದ್ಯಾರ್ಥಿಗಳ ಸಾಧನೆ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅತಿಥಿಗಳಾಗಿ ಮಾತನಾಡಿದ ಪತ್ರಕರ್ತ ಮಡಿವಾಳಪ್ಪ ಹೇರೂರ, ಶಿಕ್ಷಣಕ್ಕೆ ಅಂಬೇಡ್ಕರ್ ಅವರು ನೀಡಿದ ಆಧ್ಯತೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ತ್ಯಾಗದ ಸೇವೆಯ ಕುರಿತು ವಿವರಿಸಿದರು.
ಶಿಕ್ಷಕಿ ರಜನಿ ಪಾಟೀಲ್ ಮಾತನಾಡಿದರು. ವಾರ್ಡನ್ ಸಂತೋಷಿ ಗಂಗಶೆಟ್ಟಿ, ಶಿಕ್ಷಕರಾದ ಶಿವಕುಮಾರ ಪೂಜಾರಿ, ದತ್ತಪ್ಪ ಸೊನ್ನ, ಸಂತೋಷ ಕಾಮಶೆಟ್ಟಿ, ಮಿಲಿಂದ ಕುಮಾರ ಪೊಲೀಸ್ ಪಾಟೀಲ್, ಗೀತಾ ಬಡಿಗೇರ, ಶ್ರೀದೇವಿ ಆಶಿಹಾಳ, ಶ್ರೀದೇವಿ ಮೊರೆ, ಸ್ಮಿತಾ ಭಟ್, ದೀಪಿಕಾ ರಾಠೋಡ, ನಾದೇರಾ ಬೇಗಂ ಸೇರಿದಂತೆ ನೂರಾರು ಜನ ಪೋಷಕರು ಪಾಲ್ಗೊಂಡಿದ್ದರು. ಸಿಬ್ಬಂದಿ ಭೀರಣ್ಣ ದೇವರಮನಿ ನಿರೂಪಿಸಿ, ವಂದಿಸಿದರು.