ಆ.9ರಂದು ಕಲಬುರಗಿ ವಿಭಾಗ ನಾಲ್ಕನೇ ದಾಸ ಸಾಹಿತ್ಯ ಸಮ್ಮೇಳನ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಸುರೇಶ ಜಾಧವ ಆಯ್ಕೆ
ಕಲಬುರಗಿ: ದಾಸ ಸಾಹಿತ್ಯದಲ್ಲಿನ ಮೌಲ್ಯಗಳನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ದಕ್ಷಿಣ ವಲಯದ ಆಶ್ರಯದಲ್ಲಿ ಆಗಸ್ಟ್ 9ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ ಕಲಬುರಗಿ ವಿಭಾಗದ ನಾಲ್ಕನೇ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಸುರೇಶ ಜಾಧವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ದಕ್ಷಿಣ ವಲಯದ ಅಧ್ಯಕ್ಷ ರವಿಕುಮಾರ ಶಹಾಪೂರಕರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರವಿಕುಮಾರ ಶಹಾಪೂರಕರ್, ಜಿಲ್ಲೆಯ ಜನರ ಸಹಕಾರದೊಂದಿಗೆ ಈಗಾಗಲೇ ಹಲವು ವಿಶಿಷ್ಟ ಹಾಗೂ ವೈವಿಧ್ಯಮಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅವರ ನೇತೃತ್ವದ ಆಯ್ಕೆ ಸಮಿತಿ ಹಾಗೂ ಪರಿಷತ್ತಿನ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಡಾ. ಸುರೇಶ ಜಾಧವ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ದಾಸರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ, ಅವರ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಡಾ.ಸುರೇಶ ಜಾಧವ ಪರಿಚಯ :
ಡಾ. ಸುರೇಶ ಜಾಧವ ಅವರು ಸುಮಾರು 30 ವರ್ಷಗಳ ಕಾಲ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಲಬುರಗಿ ಮೂಲದವರಾದ ಅವರು ನೂತನ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಫಿಲ್. ಹಾಗೂ ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೇ ವಚನ ಸಾಹಿತ್ಯ, ದಾಸ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷಾ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ಅವರು, ನಯಸೇನನ ಧರ್ಮಾಮೃತದ ಭಾಷಿಕ ಅಧ್ಯಯನ ವಿಷಯಕ್ಕೆ ಎಂ.ಫಿಲ್. ಹಾಗೂ ಹರಿದಾಸರ ಕೀರ್ತನೆಗಳ ಸಾಂಸ್ಕೃತಿಕ ಅಧ್ಯಯನ ವಿಷಯಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಇಲ್ಲಿಯವರೆಗೆ ‘ಕೀರ್ತನ ಸಾಹಿತ್ಯ ಸಂಸ್ಕೃತಿ’, ‘ಸಾಹಿತ್ಯ ಸ್ಫುರಣ’, ‘ಸಂಸ್ಕೃತಿ ಶೋಧ’, ‘ಶೋಧ ತರಂಗ’, ‘ಚಿಂತನ ಸಿರಿ’, ‘ಸಾಹಿತ್ಯ ಶೋಧ’, ‘ಕಲಾವಿದರ ಬದುಕು’, ‘ಕೀರ್ತನ ಸಂಗ್ರಹ’, ‘ಆಯ್ದ ಕೀರ್ತನೆಗಳು’, ‘ಸಂವಹನ ಕನ್ನಡ’, ‘ಕರ್ನಾಟಕ ಸಂಸ್ಕೃತಿ’, ‘ಹರಿದಾಸ ಸಿರಿದೀಪ್ತಿ’ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಹಲವು ಸಂಪಾದಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚೆಗೆ ಅವರ ‘ಸಾಹಿತ್ಯ ಮಂಥನ’ ಅಭಿನಂದನಾ ಗ್ರಂಥವೂ ಪ್ರಕಟವಾಗಿದೆ.
ಅವರ ‘ಹರಿದಾಸ ಸಿರಿದೀಪ್ತಿ’ ಕೃತಿಗೆ 2021ನೇ ಸಾಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಕಸಾಪ ಪದಾಧಿಕಾರಿಗಳಾದ ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಪ್ರಲ್ಹಾದ ಪೂಜಾರಿ, ಜಯಶ್ರೀ ಯಾದಗಿರಿ, ವೆಂಕುಬಾಯಿ ರಜಪೂತ, ಶಿವಕುಮಾರ ಸಿ.ಎಚ್., ಸಂಗಪ್ಪ ಭೀಮಳ್ಳಿ, ಗಂಗಾಧರ ಬಂಗರಗಿ, ಮಧೂಸೂಧನ್ ಚಿಂತನಪಳ್ಳಿ, ಚಂದ್ರಕಾoತ ಸೂರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.