Kalaburagi | ಶರಣಬಸವ ವಿವಿಯಲ್ಲಿ ಎಕೋ ಬ್ರೇನ್ಸ್ ಟೆಕ್ನಾಲಜೀಸ್ ಕ್ಯಾಂಪಸ್ ಡ್ರೈವ್
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ಘಟಕದ ವತಿಯಿಂದ ಎಕೋ ಬ್ರೇನ್ಸ್ ಟೆಕ್ನಾಲಜೀಸ್ ಸಂಸ್ಥೆಯ ಕ್ಯಾಂಪಸ್ ನೇಮಕಾತಿ (ಕ್ಯಾಂಪಸ್ ಡ್ರೈವ್) ಮಂಗಳವಾರ ವಿಶ್ವವಿದ್ಯಾಲಯದ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ನಡೆಯಿತು.
ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆಯೋಜಿಸಿದ್ದ ಕ್ಯಾಂಪಸ್ ಡ್ರೈವ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸುಮಾರು 500 ವಿದ್ಯಾರ್ಥಿಗಳು ಹಾಗೂ ಸುರಪುರದ ವೀರಪ್ಪ ಇಂಜಿನಿಯರಿಂಗ್ ಕಾಲೇಜಿನ 70 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 570ಕ್ಕೂ ಅಧಿಕ ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ನೋಂದಾಯಿಸಿಕೊಂಡಿದ್ದರು.
ಕ್ಯಾಂಪಸ್ ಡ್ರೈವ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಕೋ ಬ್ರೇನ್ಸ್ ಟೆಕ್ನಾಲಜೀಸ್ ಸಂಸ್ಥೆಯ ಕ್ಯಾಂಪಸ್ ಹೈರಿಂಗ್ ಮುಖ್ಯಸ್ಥ ಆಕಾಶ್ ಪಿ.ಎಂ., ಹಿರಿಯ ಜಾವಾ ಡೆವಲಪರ್ ನಾಗಾರ್ಜುನ ಬಗಾಡಿ, ಬೀದರ್‌ನ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ ವಿವೇಕ್, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಲಕ್ಷ್ಮೀ ಪಾಟೀಲ ಮಕಾ, ಮೌಲ್ಯಮಾಪನ ಕುಲಸಚಿವ ಡಾ. ಎಸ್.ಎಚ್. ಹೊನ್ನಳ್ಳಿ, ಡೀನ್ ಡಾ. ಶಿವಕುಮಾರ ಜವಳಿಗಿ, ಹಣಕಾಸು ಅಧಿಕಾರಿ ಡಾ. ಕಿರಣ ಮಕಾ, ಸಂಶೋಧನಾ ಡೀನ್ ಡಾ. ಸುಜಾತಾ ಮಲ್ಲಾಪುರ ಹಾಗೂ ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ. ಶೋಭನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ, ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಗುರುತಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಿತು. ವಿವಿಧ ಹಂತಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.