Kalaburagi | ರಾಷ್ಟ್ರೀಯ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಕೊಡುಗೆ ಮಹತ್ವದ್ದು: ಪ್ರೊ.ಆರ್.ಆರ್.ಬಿರಾದಾರ್
ʼವಿಶ್ವ ಪ್ರವಾಸೋದ್ಯಮ ದಿನ–2026ʼ ಕಾರ್ಯಕ್ರಮ
ಕಲಬುರಗಿ: ರಾಷ್ಟ್ರೀಯ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಕೊಡುಗೆ ಮಹತ್ವದ್ದಾಗಿದೆ. ಪ್ರವಾಸೋದ್ಯಮವು ಆದಾಯ, ಉದ್ಯೋಗ ಹಾಗೂ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದರ ಜತೆಗೆ ಆತಿಥ್ಯ, ಸಾರಿಗೆ, ಆಹಾರ ಸೇವೆ, ಕರಕುಶಲ, ಚಿಲ್ಲರೆ ವ್ಯಾಪಾರ ಹಾಗೂ ಮನರಂಜನಾ ಕ್ಷೇತ್ರಗಳ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಆರ್.ಆರ್. ಬಿರಾದಾರ್ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ವತಿಯಿಂದ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಶರಣಬಸವ ವಿಶ್ವವಿದ್ಯಾಲಯ, ಏವಿಯೇಷನ್ ಇನ್‌ಸ್ಟಿಟ್ಯೂಟ್ ಆಫ್ ಕರ್ನಾಟಕ, ಇಂಟಾಕ್ ಕಲಬುರಗಿ ಶಾಖೆ ಹಾಗೂ ಕೆಟಿಎಫ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನ–2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ: ಪ್ರವಾಸೋದ್ಯಮದ ಮರುರೂಪಿಸುವಿಕೆ’ ವಿಷಯದಡಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಸಮುದಾಯಗಳಿಗೆ ಉದ್ಯೋಗ ಹಾಗೂ ಆರ್ಥಿಕ ಅವಕಾಶಗಳನ್ನು ಕಲ್ಪಿಸುವಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೂ ಇದು ಪೂರಕವಾಗಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗ್ರಾ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರವಾಸಿ ತಾಣಗಳ ಆಯ್ಕೆ, ಪ್ರವಾಸ ಯೋಜನೆ, ಬುಕಿಂಗ್, ವೈಯಕ್ತೀಕರಿಸಿದ ಸೇವೆಗಳು ಹಾಗೂ ತಾಣ ನಿರ್ವಹಣೆಯಲ್ಲಿ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ ಎಂದು ವಿವರಿಸಿದರು.
ವ್ಯವಹಾರ ಅಧ್ಯಯನ ನಿಕಾಯದ ಪ್ರೊ. ಪಾಂಡುರಂಗ ವಿ. ಪತ್ತಿ ಮಾತನಾಡಿ, ಭಾರತವು ವೈವಿಧ್ಯಮಯ ಸಾಂಸ್ಕೃತಿಕ, ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಪ್ರವಾಸೋದ್ಯಮ ಸಂಪನ್ಮೂಲಗಳನ್ನು ಹೊಂದಿದೆ. ಇವುಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಅಗತ್ಯವಿದೆ ಎಂದರು.
ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಜಿ. ಮಹೇಂದರ್ ಅವರು ವಿಶ್ವ ಪ್ರವಾಸೋದ್ಯಮ ದಿನದ ಮಹತ್ವ ಹಾಗೂ ಪ್ರವಾಸೋದ್ಯಮದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಆಯಾಮಗಳ ಕುರಿತು ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ನವೀನ್ ಕುಮಾರ್ ಟಿ.ಜಿ. ಮಾತನಾಡಿದರು.
ಸಹ ಪ್ರಾಧ್ಯಾಪಕ ಡಾ. ಗಣಪತಿ ಸಿನ್ನೂರು, ಇಂಟಾಕ್ ಕಲಬುರಗಿ ಶಾಖೆಯ ಮುಖ್ಯಸ್ಥ ಡಾ. ಶಂಭುಲಿಂಗ ಎಸ್. ವಾಣಿ, ಕಲಬುರಗಿಯ ‘ಟೇಕ್ ಎ ಟ್ರಿಪ್ ಟ್ರಾವೆಲ್ ಕಂಪನಿ’ ವ್ಯವಸ್ಥಾಪಕ ನಿರ್ದೇಶಕ ಪರಬಸಪ್ಪ ಬಿಜಾಪುರೆ, ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಕಲ್ಯಾಣ್ ರಾವ್ ಹಾಗೂ ಏವಿಯೇಷನ್ ಇನ್‌ಸ್ಟಿಟ್ಯೂಟ್ ಆಫ್ ಕರ್ನಾಟಕದ ಕಲಬುರಗಿ ಶಾಖಾ ವ್ಯವಸ್ಥಾಪಕ ವಾದಿರಾಜ್ ಭಾಗವಹಿಸಿದ್ದರು. ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಪ್ರೊ. ಅಂಕತಿ ರಘು ಚರ್ಚಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.