Kalaburagi | ಪೌರ ಕಾರ್ಮಿಕರಿಗೆ ನ್ಯಾಯ ನೀಡದಿದ್ದರೆ ಶವಯಾತ್ರೆ ಪ್ರತಿಭಟನೆ: ಎಐಟಿಯುಸಿ ಎಚ್ಚರಿಕೆ
ಕಲಬುರಗಿ : ಜೇವರ್ಗಿ ಪುರಸಭೆಯ 16 ಮಂದಿ ಪೌರ ಕಾರ್ಮಿಕರಿಗೆ ನ್ಯಾಯ ಒದಗಿಸದೇ ಅಧಿಕಾರ ದುರ್ಬಳಕೆ ನಡೆಸಲಾಗಿದೆ ಎಂದು ಆರೋಪಿಸಿರುವ ಜೇವರ್ಗಿ ತಾಲೂಕು ಪೌರ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ) ಹಾಗೂ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ, ಸಂಬಂಧಿತ ಅಧಿಕಾರಿಗಳನ್ನು ವಜಾಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿವೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶಕುಮಾರ್ ರಾಠೋಡ್, “ಒಂದು ವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ತಾಲೂಕು ಆಡಳಿತದ ಶವಯಾತ್ರೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
2016ರಿಂದ ಪೌರ ಕಾರ್ಮಿಕರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, 2025ರಲ್ಲಿ ಉಪ ಕಾರ್ಮಿಕ ಆಯುಕ್ತರ ನ್ಯಾಯಾಲಯವು 16 ಮಂದಿ ಕಾರ್ಮಿಕರಿಗೆ 64.80 ಲಕ್ಷ ರೂ. ಬಾಕಿ ವೇತನ ಪಾವತಿಸುವಂತೆ ಆದೇಶಿಸಿತ್ತು. ಆದರೂ ಅಧಿಕಾರಿಗಳು ಪಾವತಿ ಮಾಡದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಏಪ್ರಿಲ್ 13ರಿಂದ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಬಿರುಗಾಳಿಯಿಂದ ಟೆಂಟ್ ಮೇಲೆ ವಿದ್ಯುತ್ ಕಂಬ ಬಿದ್ದರೂ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ ಪೌರ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಂಕ್ರಮ್ಮ, ರಾಘವೇಂದ್ರ, ದೇವಕ್ಕಿ, ಶಾರದಾಬಾಯಿ, ನಾಗರಾಜ, ಷಣ್ಮುಖಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.