×
Ad

Kalaburagi | ಕಾಂಗ್ರೆಸ್ ಮೂರು ವರ್ಷದ ಸಾಧನೆ ಏನು? : ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

Update: 2026-05-22 19:27 IST

ಕಲಬುರಗಿ : ಮೂರು ವರ್ಷಗಳಲ್ಲಿ ನಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಹಗರಣಗಳೇ ನಿಮ್ಮ ಸಾಧನೆಯೇ? ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಲೂಟಿ ಹೊಡೆದು ಸಚಿವರೊಬ್ಬರು ಜೈಲಿಗೆ ಹೋದದ್ದು ಸಾಧನೆಯೇ?” ಎಂದು ಪ್ರಶ್ನಿಸಿದರು.

ಎಸ್‌ಇಪಿ ಹಾಗೂ ಟಿಎಸ್‌ಪಿ ನಿಧಿಗಳ ದುರುಪಯೋಗವೇ ಸಾಧನೆಯೇ ಎಂದು ಪ್ರಶ್ನಿಸಿದ ಅವರು, “ಸಾಧನೆಯ ಕಾರಣಕ್ಕಾಗಿಯೇ ಕೆಎಸ್‌ಆರ್‌ಟಿಸಿ ನೌಕರರು ಚಳವಳಿಗೆ ಕರೆ ಕೊಟ್ಟಿದ್ದಾರಾ?” ಎಂದು ಟೀಕಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದು ಸರ್ಕಾರದ ಸಾಧನೆಯೇ ಎಂದು ಪ್ರಶ್ನಿಸಿದ ಅವರು, “ಮೂರು ವರ್ಷಗಳಲ್ಲಿ ರಾಜ್ಯದ ಜನರು ಹೆಮ್ಮೆಪಡುವಂತಹ ಯಾವ ಕೆಲಸ ಮಾಡಿದ್ದೀರಿ?” ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

“ಶೇ.60 ಕಮಿಷನ್ ಸಾಧನೆಯೇ? ಸರ್ಕಾರಿ ನೌಕರರ ಆತ್ಮಹತ್ಯೆ ಸಾಧನೆಯೇ?” ಎಂದು ಪ್ರಶ್ನಿಸಿದ ಅವರು, ಗ್ಯಾರಂಟಿ ಯೋಜನೆಗಳ ಕುರಿತೂ ವ್ಯಂಗ್ಯವಾಡಿದರು.

“ಮುಖ್ಯಮಂತ್ರಿ ಕುರ್ಚಿಯಲ್ಲಿ ಎಷ್ಟು ದಿನ ಇರುತ್ತಾರೋ ಎಂಬ ಗ್ಯಾರಂಟಿಯೇ ಸಿದ್ದರಾಮಯ್ಯ ಅವರಿಗೆ ಇಲ್ಲ. ಅವರಿಗೇ ತಮ್ಮ ಕುರ್ಚಿಯ ಗ್ಯಾರಂಟಿ ಇಲ್ಲದಿದ್ದಾಗ ಇತರ ಗ್ಯಾರಂಟಿಗಳ ಬಗ್ಗೆ ಹೇಗೆ ಮಾತನಾಡುತ್ತಾರೆ?” ಎಂದು ಹೇಳಿದರು.

ರಾಜ್ಯದ ಒಟ್ಟು ಸಾಲ 10 ಲಕ್ಷ ಕೋಟಿ ರೂ. ತಲುಪಿದೆ ಎಂದು ಆರೋಪಿಸಿದ ಅವರು, “ಸಾಲ ಮಾಡದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ” ಎಂದರು.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ವಿಚಾರ ಪ್ರಸ್ತಾಪಿಸಿದ ಅವರು, “ಕರ್ನಾಟಕ ಸರ್ಕಾರ ಮೂರು ಬಾರಿ ಸೆಸ್ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಬೆಲೆ ಇಳಿಸಿದ ಬಳಿಕವೂ ರಾಜ್ಯ ಸರ್ಕಾರ ಸೆಸ್ ಏರಿಕೆ ಮಾಡಿದ್ದು ಯಾಕೆ?” ಎಂದು ಪ್ರಶ್ನಿಸಿದರು.

“ರಾಜ್ಯ ಸರ್ಕಾರ ತನ್ನ ಸೆಸ್ ಕಡಿತಗೊಳಿಸಲಿ. ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಯಾರು ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ ಎಂಬ ಚರ್ಚೆ ನಡೆಯಲಿ” ಎಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News