Kalaburagi | ಜೇವರ್ಗಿಯಲ್ಲಿ ಭಾರೀ ಮಳೆ–ಗಾಳಿಗೆ ಕೋಟಿ ವೆಚ್ಚದ ಸ್ಟೇಡಿಯಂ ಮೇಲ್ಛಾವಣಿ ಕುಸಿತ
ಕಳಪೆ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ : ತನಿಖೆಗೆ ಆಗ್ರಹ
ಜೇವರ್ಗಿ: ಪಟ್ಟಣದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸ್ಟೇಡಿಯಂ ಸಂಪೂರ್ಣವಾಗಿ ಕುಸಿದು ಬಿದ್ದ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಸ್ಟೇಡಿಯಂ ಹಾಳಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.
ಭಾರಿ ಗಾಳಿಯ ಹೊಡೆತಕ್ಕೆ ಸ್ಟೇಡಿಯಂನ ಮೇಲ್ಛಾವಣಿ, ಗೋಡೆಗಳು ಹಾಗೂ ಆಸನ ವ್ಯವಸ್ಥೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಭೇಟಿ ನೀಡಿದ ನಾಗರಿಕರು ಹಾಗೂ ಕ್ರೀಡಾಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದರೂ ಕಾಮಗಾರಿ ಅತ್ಯಂತ ಕಳಪೆ ಮಟ್ಟದಲ್ಲಿ ನಡೆದಿರುವುದೇ ಈ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಸರ್ಕಾರದ ಹಣ ವ್ಯರ್ಥವಾಗಿದ್ದು, ಜನರ ತೆರಿಗೆ ಹಣಕ್ಕೆ ನ್ಯಾಯ ಸಿಕ್ಕಿಲ್ಲ. ನಿರ್ಮಾಣದ ವೇಳೆ ಗುಣಮಟ್ಟ ಪರಿಶೀಲನೆ ನಡೆದಿದೆಯೇ ಎಂಬುದೇ ಅನುಮಾನ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.