×
Ad

Kalaburagi | ಕಲಾವಿದ ಶರಣಬಸಪ್ಪ ಬಗಲಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

Update: 2026-06-01 21:34 IST

ಕಲಬುರಗಿ: ಕಲಬುರಗಿಯ ಹವ್ಯಾಸಿ ಚಿತ್ರಕಲಾವಿದ ಶರಣಬಸಪ್ಪ ಜಿ. ಬಗಲಿ ಅವರ ವಾಟರ್ ಕಲರ್, ಸ್ಕೆಚ್ ಹಾಗೂ ಪೇಂಟಿಂಗ್‌ಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ನಗರದ ಮಾನಕರ ಲೇಔಟ್‌ನ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ರವಿವಾರ ಚಾಲನೆ ನೀಡಲಾಯಿತು.

ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಫೈನ್ ಆರ್ಟ್ಸ್ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ನಿಷ್ಟಿ ಜ್ಯೋತಿ ಬೆಳಗಿಸುವ ಮೂಲಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಇಂದಿನ ಸಂದರ್ಭದಲ್ಲಿ ಚಿತ್ರಕಲೆಗೆ ಅಪಾರ ಮೌಲ್ಯವಿದ್ದು, ಹವ್ಯಾಸಿ ಕಲಾವಿದರು ತಮ್ಮ ಕಲಾಕೃತಿಗಳನ್ನು ರಚಿಸಿ ಪ್ರದರ್ಶನ ಹಾಗೂ ಮಾರಾಟ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಸಮಾಜದ ಮುಂದೆ ಅನಾವರಣಗೊಳಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಎನ್.ವಿ. ಪದವಿ ಮಹಾವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಜಿತೇಂದ್ರ ಜಿ. ಕೋಥಳಿಕರ ಮಾತನಾಡಿ, ಶರಣಬಸಪ್ಪ ಬಗಲಿ ಅವರ ಕಲಾಕೃತಿಗಳಲ್ಲಿ ಉತ್ತಮ ಸಂಯೋಜನೆ, ಬಣ್ಣಗಳ ಸಮತೋಲನ ಮತ್ತು ರೇಖಾಚಿತ್ರಗಳ ಪ್ರಬುದ್ಧತೆ ಕಾಣಸಿಗುತ್ತಿದ್ದು, ಅವರ ಕಲಾಸಾಧನೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ. ಜೋಶಿ ಮಾತನಾಡಿ, ಹವ್ಯಾಸಿ ಕಲಾವಿದರಿಗೆ ಪ್ರೋತ್ಸಾಹ ಮತ್ತು ಪ್ರದರ್ಶನ ವೇದಿಕೆಗಳ ಅಗತ್ಯವಿದೆ. ಬಿಸಿಲು ಆರ್ಟ್ ಗ್ಯಾಲರಿ ಅನೇಕ ಹೊಸ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿ.ಬಿ. ಬಿರಾದಾರ ಮಾತನಾಡಿ, ಸೌಂದರ್ಯ ಪ್ರಜ್ಞೆ ವಿದ್ಯಾವಂತರಿಗಿಂತಲೂ ಸಾಮಾನ್ಯ ಜನರಲ್ಲಿ ಹೆಚ್ಚು ಕಂಡುಬರುತ್ತದೆ. ಕಲೆಯ ಮೆಚ್ಚುಗೆಯ ಮೂಲಕ ಜನರು ಜೀವನದಲ್ಲಿ ಸೌಂದರ್ಯದ ಅನುಭವ ಪಡೆಯುತ್ತಾರೆ ಎಂದು ಹೇಳಿದರು.

ಮೇ 31ರಂದು ಆರಂಭಗೊಂಡಿರುವ ಈ ಪ್ರದರ್ಶನ ಜೂನ್ 5ರವರೆಗೆ ನಡೆಯಲಿದ್ದು, ಪ್ರತಿದಿನ ಸಂಜೆ 4ರಿಂದ 8 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ಹವ್ಯಾಸಿ ಕಲಾವಿದನ ಕಲಾತ್ಮಕ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಲಾರಸಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಪ್ರದರ್ಶನ ವೀಕ್ಷಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ನಾಡೋಜ ಜೆ.ಎಸ್. ಖಂಡೇರಾವ, ನಿವೃತ್ತ ದೂರದರ್ಶನ ನಿರ್ದೇಶಕ ಎಂ.ಬಿ. ಪಾಟೀಲ, ಪತ್ರಕರ್ತ ಗುರುರಾಜ ದೇಸಾಯಿ, ಎಸ್.ಎನ್. ಪಾಟೀಲ, ದೊಣ್ಣೆಗೌಡ, ಚಿತ್ರಲೇಖಾ ಪಾಟೀಲ, ಡಾ. ಆಕಾಶ, ಡಾ. ಪರಶುರಾಮ, ಮೀನಾಕ್ಷಿ ಗುತ್ತೇದಾರ, ಬಗಲಿ ಕುಟುಂಬದ ಸದಸ್ಯರು ಹಾಗೂ ವಿ.ಬಿ. ಬಿರಾದಾರ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ರವಿಚಂದ್ರ ಬಿರಾದಾರ ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ಕೋರಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಬಿರಾದಾರ ಸ್ವಾಗತಿಸಿದರು. ರಾಜಕುಮಾರ ಕಾಳೆ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News