Kalaburagi | ಬಿಜೆಪಿ ಶಾಸಕನ ಪುತ್ರನ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಜೀವ ಬೆದರಿಕೆ ಆರೋಪ: ಎಫ್‌ಐಆರ್ ದಾಖಲು

Update: 2026-08-04 21:04 IST

ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಮಗ ಆಕಾಶ್ ಮತ್ತಿಮಡು

ಕಲಬುರಗಿ : ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಪುತ್ರ ಆಕಾಶ್ ಮತ್ತಿಮಡು ವಿರುದ್ಧ ದಾಖಲಿಸಿರುವ ಖಾಸಗಿ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿ, ಮೊಬೈಲ್ ಕರೆ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾಳನೂರ ತಾಂಡಾ ನಿವಾಸಿ ಹಾಗೂ ಸಮಾಜ ಸೇವಕ ರಾಮು ರಾಠೋಡ ನೀಡಿದ ದೂರಿನ ಪ್ರಕಾರ, ಕಲಬುರಗಿ ತಾಲೂಕಿನ ಕೇರೂರ ಗ್ರಾಮದ ಸರ್ವೇ ನಂ. 55/8ರ ಒಂದು ಎಕರೆ ಜಮೀನಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿ.ಸಿ. ನಂ. 250/2025) ದಾಖಲಿಸಿದ್ದು, ಪ್ರಕರಣ ವಿಚಾರಣೆಯಲ್ಲಿದೆ. ಇದೇ ಸಂಬಂಧ ಲೋಕಾಯುಕ್ತಕ್ಕೂ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಜುಲೈ 19ರಂದು ರಾತ್ರಿ ಸುಮಾರು 11 ಗಂಟೆಗೆ 9606329099 ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ಗುಡಿಗುಂಡಾ ತಾಂಡಾದ ರವಿ ರಾಠೋಡ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಶಾಸಕ ಬಸವರಾಜ ಮತ್ತಿಮಡು ಅವರ ಪುತ್ರನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುಟುಂಬ ಸಮೇತ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಈ ದೂರಿನ ಆಧಾರದ ಮೇಲೆ ಮೊದಲಿಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಎನ್‌.ಸಿ. ನಂ. 09/2026 ದಾಖಲಾಗಿತ್ತು. ಪ್ರಕರಣವು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 351(2) ಹಾಗೂ 352ರ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆಯಲಾಗಿತ್ತು.

ಜಿಲ್ಲಾ ನ್ಯಾಯಾಲಯದ ಅನುಮತಿಯ ಬಳಿಕ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪೊಲೀಸರು ಗುನ್ನೆ ನಂ. 186/2026ರಲ್ಲಿ ಬಿಎನ್‌ಎಸ್ ಕಲಂ 351(2) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News