Chincholi | ಶಾಖಾಪುರ ದಲಿತ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ ಕ್ರಮಕ್ಕೆ ಆಗ್ರಹ

Update: 2026-08-04 20:02 IST

ಚಿಂಚೋಳಿ, ಆ.5: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಕುಟುಂಬದ ಮೇಲೆ ನಡೆದಿರುವ ಜಾತಿ ನಿಂದನೆ ಹಾಗೂ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರವಾದಿಗಳು ಹಾಗೂ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಮಂಗಳವಾರ ತಹಶೀಲ್ದಾರರ ಮೂಲಕ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಆಗಸ್ಟ್ 1ರಂದು ಶಾಖಾಪುರ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆಗಾಗಿ ಸಮಾಧಿ ಗುಂಡಿ ತೆಗೆಯಲು ನಿರಾಕರಿಸಿದ ವಿಚಾರವನ್ನು ನೆಪವನ್ನಾಗಿ ಮಾಡಿಕೊಂಡು, ಕೂಲಿ ಕೆಲಸಕ್ಕೆ ತೆರಳುತ್ತಿದ್ದ ದಲಿತ ಸಮುದಾಯದ ದೇವಪ್ಪ ಹಾಗೂ ಅವರ ಕುಟುಂಬದವರನ್ನು ದಾರಿ ಮಧ್ಯೆ ತಡೆದು ಜಾತಿ ನಿಂದನೆ ಮಾಡಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಬಳಿಕ ಮಹಿಳೆಯರು ಸೇರಿದಂತೆ ಕುಟುಂಬದ ಸದಸ್ಯರ ಮೇಲೆ ದೊಣ್ಣೆ, ಬಡಿಗೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಹೆಸರಿಸಲಾದ 17 ಆರೋಪಿಗಳನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಒತ್ತಾಯಿಸಿದೆ.

ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೊರೆಯಬೇಕಾದ ಗರಿಷ್ಠ ಪರಿಹಾರ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಗೌತಮ್ ಬೊಮನಲ್ಲಿ, ಹನುಮಂತ ಪೂಜಾರಿ, ಚೇತನ ನೀರಾಳಕರ್, ಓಮನಾಥ ಕೋರವಿ, ವಿಠಲ್ ಕುಸಾಳೆ, ರಮೇಶ್, ಗೋಪಾಲ್ ರಾಂಪುರೆ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News