Kalaburagi | ಸಾಹಿತ್ಯವು ಸಮಾಜಕ್ಕೆ ಕಣ್ಣು, ಬದುಕಿಗೆ ಬೆಳಕು: ಚೆನ್ನವೀರ ಶಿವಾಚಾರ್ಯರು
23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕಲಬುರಗಿ: ಸಮಾಜಕ್ಕೆ ಕಣ್ಣಾಗಿ, ಮನಸ್ಸಿನ ಭಾವನೆಗಳಿಗೆ ಧ್ವನಿಯಾಗಿ ಹಾಗೂ ಬದುಕಿನ ಹಾದಿಗೆ ಬೆಳಕಾಗಿ ಸಾಹಿತ್ಯ ಸದಾ ಜೀವಂತವಾಗಿರುತ್ತದೆ. ನಾಡು-ನುಡಿ ಕಟ್ಟುವ ಪ್ರಬುದ್ಧ ಮನಸ್ಸುಗಳಿಂದ ಕನ್ನಡ ನಾಡನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರು ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕನ್ನಡಿಗರು ಪ್ರತಿದಿನ ಮುಂಜಾನೆ ಎದ್ದು ಕನ್ನಡಮ್ಮನನ್ನು ನೆನೆಯುವ ಮೂಲಕ ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸಬೇಕು. ಆ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸವಾಗಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ನಾಗೇಂದ್ರ ಮಸೂತಿ ಮಾತನಾಡಿ, ನಮ್ಮ ಭಾಷೆ ಮತ್ತು ಸಂಸ್ಕೃತಿ ನಮ್ಮ ಜೀವನದ ಅಸ್ಮಿತೆಯಾಗಬೇಕು. ಮಾತೃಭಾಷೆಯ ಶಿಕ್ಷಣದ ಮೂಲಕ ಉನ್ನತ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು ಹಾಗೂ ಕೈಗಾರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುವಂತಾಗಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ನಿರ್ಲಕ್ಷ್ಯಕ್ಕೊಳಗಾಗಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು. ಕನ್ನಡಕ್ಕೆ ಮೊಟ್ಟಮೊದಲ ಲಾಕ್ಷಣಿಕ ಗ್ರಂಥ ನೀಡಿದ ಈ ನೆಲದ ಹಿರಿಮೆಯನ್ನು ಎತ್ತಿಹಿಡಿಯಬೇಕು. ಜನಪದರು ಕಟ್ಟಿಕೊಟ್ಟಿರುವ ಸಿರಿಸಂಪತ್ತಿನ ನಾಡನ್ನು ಗೌರವದಿಂದ ಕಾಣಬೇಕು ಎಂದು ಅವರು ಹೇಳಿದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಸಮಾಜದಲ್ಲಿ ಮನೆ ಮಾಡಿರುವ ಮೂಢನಂಬಿಕೆ, ಮೌಢ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ಅಂಧಕಾರವನ್ನು ಹೋಗಲಾಡಿಸಲು ಸಾಹಿತ್ಯ ಜ್ಞಾನದ ಬೆಳಕನ್ನು ನೀಡುವುದರ ಜೊತೆಗೆ ಹೊಸ ಚೈತನ್ಯವನ್ನೂ ತುಂಬುತ್ತದೆ ಎಂದರು.
ಸಮ್ಮೇಳನವನ್ನು ಶರಣಬಸವೇಶ್ವರ ಸಂಸ್ಥಾನದ ಶ್ರೀ ದೊಡ್ಡಪ್ಪ ಎಸ್. ಅಪ್ಪಾ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ನಿವೃತ್ತ ಮುಖ್ಯ ಎಂಜಿನಿಯರ್ ಡಾ. ಸುರೇಶ ಶರ್ಮಾ, ಮಹೇಶ ಹೂಗಾರ, ಸಂತೋಷ ಗಂಗೂ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ಸೈಯ್ಯದ್ ನಜೀರುದ್ದೀನ್ ಮುತ್ತವಲ್ಲಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ಧರ್ಮರಾಜ ಜವಳಿ, ಡಾ. ಶಿವಶರಣಪ್ಪ ಮೋತಕಪಳ್ಳಿ, ಶಿವಲೀಲಾ ಕಲಗುರ್ಕಿ, ರಾಜೇಂದ್ರ ಮಾಡಬೂಳ, ಡಾ. ಬಾಬುರಾವ ಶೇರಿಕಾರ, ದಿನೇಶ ಮದಕರಿ, ಸಿದ್ಧರಾಮ ಹಂಚನಾಳ, ಈರಣ್ಣ ಸೋನಾರ, ರಮೇಶ ಬಡಿಗೇರ, ಎಸ್.ಕೆ. ಬಿರಾದಾರ, ಸುರೇಶ ದೇಶಪಾಂಡೆ, ಪ್ರಭುಲಿಂಗ ಮೂಲಗೆ, ರವಿ ಶಹಾಪೂರಕರ್, ಸಂತೋಷ ಕುಡಳ್ಳಿ ಹಾಗೂ ಕಲ್ಯಾಣಕುಮಾರ ಶೀಲವಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಶಿವಶರಣಪ್ಪ ಮೋತಕಪಳ್ಳಿ ಹಾಗೂ ವಿಜಯಕುಮಾರ ತೇಗಲತಿಪ್ಪಿ ಸಂಪಾದಕತ್ವದ ‘ಸಾಹಿತ್ಯ ಬೆಳಕು’ ಕೃತಿ ಮತ್ತು ಸಮ್ಮೇಳನಾಧ್ಯಕ್ಷ ಡಾ. ನಾಗೇಂದ್ರ ಮಸೂತಿ ಅವರ ‘ಕಿರು ಭಾಮಿನಿ’ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ :
ಸಮ್ಮೇಳನದ ಅಂಗವಾಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ವಿಶ್ವೇಶ್ವರಯ್ಯ ಭವನದವರೆಗೆ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಜಯ ಕರ್ನಾಟಕ ಸಂಘಟನೆಯ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾ ತಂಡಗಳೊಂದಿಗೆ ಕನ್ನಡದ ಮನಸ್ಸುಗಳು ಹೆಜ್ಜೆ ಹಾಕಿದರು. ಡೊಳ್ಳು ಕುಣಿತ, ಲೇಜಿಮ್ ವಾದ್ಯ ಹಾಗೂ ವಿವಿಧ ನೃತ್ಯಗಳೊಂದಿಗೆ ಮೆರವಣಿಗೆ ಕಳೆಗಟ್ಟಿತು. ಮಾರ್ಗದುದ್ದಕ್ಕೂ ಕನ್ನಡಪರ ಘೋಷಣೆಗಳನ್ನು ಕೂಗುತ್ತಾ, ಕನ್ನಡ ಗೀತೆಗಳನ್ನು ಹಾಡುತ್ತಾ ಜನರು ಸಂಭ್ರಮಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು.
ಸಾಹಿತ್ಯ ಕ್ಷೇತ್ರದ ಹಿರಿಯ ವಿಚಾರಶೀಲರಾದ ಡಾ. ಹನುಮಂತರಾವ ದೊಡ್ಡಮನಿ, ಸಿದ್ಧರಾಮ ಪೊಲೀಸ್ ಪಾಟೀಲ, ರಾವೂಫ್ ಖಾದ್ರಿ, ಡಾ. ಎಸ್.ಎಸ್. ಪಾಟೀಲ, ಡಾ. ಶಶಿಶೇಖರ ರೆಡ್ಡಿ, ಶಿವಶರಣಪ್ಪ ಸಿರಿ, ಉಮೇಶ ಬಾಬು ಸಾಸಾಬಾಳ, ಪವನಕುಮಾರ ವಳಕೇರಿ, ಶಾಮರಾವ ಪ್ಯಾಟಿ ಹಾಗೂ ಡಾ. ಬಸವರಾಜ ಭಾಗಾ ಅವರನ್ನು ‘ಸಾಹಿತ್ಯ ಸಂಗಾತಿ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು.
‘ಅರಿವಿನ ಸಿರಿ’ ಗೋಷ್ಠಿ :
ಹಿರಿಯ ಸಾಹಿತಿ ಡಾ. ಕಲ್ಯಾಣರಾವ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಅರಿವಿನ ಸಿರಿ’ ಗೋಷ್ಠಿಯಲ್ಲಿ ಕನ್ನಡ ಕಾವ್ಯ ಪರಂಪರೆ ಮತ್ತು ಮೌಲ್ಯಗಳ ಕುರಿತು ಡಾ. ಶ್ರೀಶೈಲ ನಾಗರಾಳ, ಕನ್ನಡ ಸಾಹಿತ್ಯ ವಿಕಾಸದಲ್ಲಿ ಕಥೆ ಮತ್ತು ಕಾದಂಬರಿಗಳ ಪಾತ್ರದ ಕುರಿತು ಡಾ. ಕೆ.ಎಸ್. ನಾಯಕ ಹಾಗೂ ಮಹಿಳಾ ವಿಕಾಸದ ಮುನ್ನೋಟದ ಕುರಿತು ಡಾ. ಜಯದೇವಿ ಗಾಯಕವಾಡ ಮಾತನಾಡಿದರು. ಸೈಯ್ಯದ್ ಎಸ್.ಜೆ. ಇನಾಮದಾರ, ಜಯಶ್ರೀ ಜಮಾದಾರ ಹಾಗೂ ಪೂಜಾ ಬಂಕಲಗಿ ವೇದಿಕೆಯಲ್ಲಿದ್ದರು. ಅನೇಕ ಸೇವಾಮುಖಿಗಳಿಗೆ ‘ಸೇವಾ ಕಲಾ ಕೌಶಲ್ಯ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು.
ಸಾಹಿತಿ ಡಾ. ಚಿ.ಸಿ. ನಿಂಗಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ‘ನೋಡು ಕನ್ನಡ ಹಾಡು’ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಕವಿಗಳು ಭಾಗವಹಿಸಿ, ಪ್ರಚಲಿತ ವಿದ್ಯಮಾನಗಳ ಕುರಿತು ತಮ್ಮ ಕವನಗಳನ್ನು ವಾಚಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಪತ್ರಕರ್ತ ರಾಜಕುಮಾರ ಬಿ. ಉದನೂರ ಆಶಯ ನುಡಿಗಳನ್ನಾಡಿದರು. ಡಾ. ರಾಜೇಂದ್ರ ಕೊಂಡಾ ಮಾತನಾಡಿದರು.