ಕಲಬುರಗಿ: ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಲಬುರಗಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ನಜಮ ಉಲ್ ಇಸ್ಲಾಂ ಹೇಳಿದರು.

ಗುರುವಾರ ಕಲಬುರಗಿ ತಾಲ್ಲೂಕಿನ ಫರಹತಾಬಾದ್ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರವು ಅತ್ಯಂತ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳು ಅರ್ಹ ಮತ್ತು ಅಗತ್ಯವಿರುವ ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅತ್ಯಂತ ಪ್ರಮುಖವಾದ ಈ ಪ್ರಗತಿ ಪರಿಶೀಲನಾ ಸಭೆಗೆ ಗೈರುಹಾಜರಾದ ವಿವಿಧ ಇಲಾಖೆಗಳ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಗೈರಾದ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿಯ ಯೋಜನಾ ನಿರ್ದೇಶಕರು, ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮದ (ಜೆಸ್ಕಾಂ) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಫರಹತಾಬಾದ್ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಪಂಚಾಯಿತಿ ಸಿಬ್ಬಂದಿ, ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor