Kalaburagi | ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ: ಡಿಸಿ ಇಕ್ರಂ ಶರೀಫ್
ಕಲಬುರಗಿ: ನಗರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರ ನೇತೃತ್ವದಲ್ಲಿ ಗುರುವಾರ ನಗರದ ವಿವಿಧ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಗುರುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಪರಿಶೀಲನಾ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡವು ನಗರದ ಐತಿಹಾಸಿಕ ಜುನೈದಿ ದರ್ಗಾ, ಬಸವೇಶ್ವರ ಕಾಲನಿ ಸಮೀಪದ ಗುಬ್ಬಿ ಕಾಲನಿಯಲ್ಲಿರುವ ಅನಾಮಧೇಯ ಐತಿಹಾಸಿಕ ಸ್ಮಾರಕ ಹಾಗೂ ರೋಜಾ ಪ್ರದೇಶದಲ್ಲಿರುವ ಕಮಾಲೆ ಮುಜಾಹಿದ್ದೀನ್ ದರ್ಗಾಗಳಿಗೆ ಭೇಟಿ ನೀಡಿ, ಅವುಗಳ ಐತಿಹಾಸಿಕ ಮಹತ್ವ ಮತ್ತು ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿತು.
ಈ ಸಂದರ್ಭದಲ್ಲಿ ಕಲಬುರಗಿ ನಗರದ ಬಹಮನಿ ಕಾಲದ ಐತಿಹಾಸಿಕ ಸ್ಮಾರಕಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಯಿತು. ಸ್ಮಾರಕಗಳ ಸಂರಕ್ಷಣೆ, ಸ್ವಚ್ಛತೆ, ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಮಾಹಿತಿ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಪ್ರವಾಸಿಗರಿಗೆ ಅನುಕೂಲವಾಗುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಆಳಂದ ಚೆಕ್ಪೋಸ್ಟ್ನಲ್ಲಿರುವ ಬಾಲಮಂದಿರ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ಗೂ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಮತ್ತು ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಲಬುರಗಿ ನಗರದ ತಹಶೀಲ್ದಾರ್ ಆನಂದ್ ಶೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ್ ರಾಠೋಡ್, ಪುರಾತತ್ವ ಇಲಾಖೆಯ ಅಧಿಕಾರಿ ಡಾ. ರಾಜಾರಾಮ್, ಇತಿಹಾಸ ಸಂಶೋಧಕ ಡಾ. ಶಂಭುಲಿಂಗ ಎಸ್. ವಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.